ಅವಳು ಕಣ್ಣು ಹೊಡೆದು ಗಳಿಸಿದ್ದು ಏನನ್ನು?

Posted In : ಸಂಗಮ, ಸಂಪುಟ

ಷರಾ: ಗೀರ್ವಾಣಿ

ದೇಶದಲ್ಲಿ ಅಸಹಿಷ್ಣುತೆಯಿದೆ ಎಂದು ಬಾಯಿ ಬಡಿದುಕೊಳ್ಳುವವರಿಗೆ ಇನ್ನೊಂದು ಶಬ್ದ ನೆನಪಿಸಬೇಕೆನಿಸುತ್ತಿದೆ. ಇದೇನು ಹೊಸ ಶಬ್ದವಲ್ಲ. ಆದರೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನಬಹುದು. ಅದೇನೆಂದರೆ ‘ಅಸಮಾ ನತೆ’. ಅಸಮಾನತೆ ಎಂದರೆ ಅಸಮಾನತೆ ಎಂದುಕೊಳ್ಳಬೇಡಿ. ಅಸಮಾನತೆ ಇರುವುದು ಸಾಮಾಜಿಕ ಜಾಲತಾಣಿಗರು ಹಾಗೂ ಜಾಲತಾಣಿಗರಲ್ಲ ದವರ ನಡುವೆ. ಇತ್ತೀಚೆಗೆ ದೇಶ ಇವರಿಬ್ಬರ ನಡುವೆ ಅಕ್ಷರಶಃ ಇಬ್ಭಾಗವಾಗಿದೆ. ಹೀಗೆಂದರೆ ತಮಾಶೆ ಎನಿಸಬಹುದು. ಆದರೆ ನಮ್ಮ ದೇಶವನ್ನು ಈಗ ಸ್ಮಾರ್ಟ್ ಫೋನ್ ಹೊಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವವರು ಹಾಗೂ ಇವೆ ರಡೂ ಇಲ್ಲದವರ ನಡುವೆ ಡಿವೈಡ್ ಮಾಡುವುದು ಅನಿವಾರ್ಯ.

ಕಾರಣ ಸೋಷಿಯಲ್ ಮೀಡಿಯಾ ಮಂದಿ ದೇಶದ ಟ್ರೆಂಡ್ ಸೆಟ್ಟರ್ ಆಗುತ್ತಿ ದ್ದಾರೆ. ಟ್ವಿಟರ್‌ನಲ್ಲಿದ್ದು, ದೇಶದ ಆಗುಹೋಗುಗಳಿಗೆ ತಕ್ಷಣ ಸ್ಪಂದಿಸುತ್ತ, ದೇಶದ ವಿದ್ಯಮಾನಗಳ ಮಹತ್ವದ ಭಾಗವಾಗು ತ್ತಿದ್ದಾರೆ. ಆದರೆ ಇದರಿಂದ ಹೊರಗುಳಿದವರು ಒಂದೆರಡು ದಿನ ಹಿಂದೆ ಉಳಿದಿದ್ದಾರೆ ಎನ್ನದೇ ಗತಿಯಿಲ್ಲ. ಕೆಲವು ವಿಷಯಗಳು ಇವರ ಅರಿವಿಗೆ ಬಾರದೇ ಮುಗಿದುಹೋಗಿರುತ್ತದೆ. ಕೆಲವು ಗೊತ್ತಾಗುವಷ್ಟರಲ್ಲಿ ತಡವಾಗಿರುತ್ತದೆ.

ಎರಡು ದಿನದ ಹಿಂದೆ ಪ್ರಿಯಾ ಪ್ರಕಾಶ್ ವಾರಿಯರ್ ಎಂಬ ಕೇರಳದ ಹುಡುಗಿ ಇದ್ದಕ್ಕಿದ್ದಂತೆ ಜಾಲತಾಣಗಳಲ್ಲಿ ಸುದ್ದಿಯಾಗಿ ಹೋದಳು. ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಪಾಲೋವರ್ಸ್ (Followers)ಅನ್ನು ಸಂಪಾದಿಸಿ ಬಿಟ್ಟಳು. ಹೇಗೆಂದರೆ ಕೇವಲ ಮೋಹಕವಾಗಿ ಕಣ್ಣು ಹೊಡೆದು! 18 ವಯಸ್ಸಿನ ಈ ಹುಡುಗಿಯ ಫೋಟೋಗಳು ಅದೆಷ್ಟು ವೈರಲ್ ಆಯಿತೆಂದರೆ ಜನ ಮುಗಿಬಿದ್ದು ಅವಳ ಹಳೆಯ ಫೋಟೋಗಳನ್ನೆಲ್ಲ ಬಗೆದು ತೆಗೆದರು. ಅವಳ ಬೆಣ್ಣೆಯಂಥ ಮುಖ ಮೇಕಪ್ ಇಲ್ಲದಾಗ ಎಷ್ಟು ಖರಾಬ್ ಆಗಿ ಕಾಣಿಸುತ್ತದೆ ಎಂದು ತೋರಿಸಿದರು. ಅವಳ ಕಣ್ಣೋಟದ ವೀಡಿಯೊ ಇರಿಸಿಕೊಂಡು ಡಬ್‌ಸ್ಮಾಶ್ ಮಾಡಿದರು, ರಾಹುಲ್ ಗಾಂಧಿ ಯ ಜತೆ ಹೋಲಿಸಿ ಟ್ರೋಲ್ ಮಾಡಿದರು, ಶಿವರಾತ್ರಿ ದಿನ ಅವಳ ಹಣೆಗೇ ನಾಮ ಬಳಿದು ಶುಭಾಶಯ ಕೋರಿದರು.

ಕೊನೆಗೆ ಕತ್ರೀನಾ ಕೈಫ್ ಇಲ್ಲಿಯವರೆಗಿನ ಕೆರಿಯರ್‌ನಲ್ಲೇ ಅವಳಂಥ ಫೇಶಿಯಲ್ ಕೊಟ್ಟಿಲ್ಲ ಎಂದೂ ಕಮೆಂಟಿಸಿದರು. ಇಲೆಕ್ಟ್ರಾ ನಿಕ್ ಮಾಧ್ಯಮದವರು ಕೂಡ ಹಿಂದೆ ಬೀಳಲಿಲ್ಲ. ಅವಳನ್ನಿಟ್ಟುಕೊಂಡು ಸುದ್ದಿ ಮಾಡಿದ್ದೇ ಮಾಡಿದ್ದು. ಆದರೆ ಈ ವಿಚಾರ ಅಲ್ಲೆಲ್ಲೋ ಬೀದಿ ಪಕ್ಕ ಬಜ್ಜಿ ಮಾರುತ್ತಿದ್ದ ಬಡ ನಿಂಗಮ್ಮನಿಗೆ ಏನೇನೂ ಗೊತ್ತಾಗಲಿಲ್ಲ. ಅಟೋ ಓಡಿಸುತ್ತಿದ್ದ ಮಾದೇಶನಿಗೆ ಗಂಧಗಾಳಿಯೂ ಇರಲಿಲ್ಲ. ಮನೆ ಕಟ್ಟುತ್ತಿದ್ದ ಗಾರೆಯವನಿಗೆ ಪ್ರಿಯಾ ವಾರಿಯರ್ ಯಾರೆಂದೇ ತಿಳಿದಿಲ್ಲ. ಅಲ್ಲೆಲ್ಲೋ ಇರುವ ಕನ್ನಡ ಶಾಲೆಯ ಶಿಕ್ಷಕನಿಗೂ ಇದರ ಆಗುಹೋಗು ತಿಳಿಯಲಿಲ್ಲ. ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದವನಿಗೆ ಈ ಹುಯಿಲು ಆಗಲಿಲ್ಲ. ಆದರೆ ರಾತ್ರಿ ಬೆಳಗಾಗುವುಷ್ಟರಲ್ಲಿ ಈ ಹುಡುಗಿ ಜಾಲತಾಣಿಗರ ಫೇವರೆಟ್ ಎನಿಸಿಕೊಂಡು ಬಿಟ್ಟಳು.

ಪ್ರಿಯಾ ವಾರಿಯರ್ ಬಗ್ಗೆ ಕುತೂಹಲದಿಂದ ನೋಡಿದ್ದು, ಪ್ರತಿಕ್ರಿಯಿಸಿದ್ದು, ಫಾಲೋ ಮಾಡಿದ್ದು ಕೇವಲ ಸಾಮಾಜಿಕ ಜಾಲ ತಾಣಿಗರು. ನಿತ್ಯ ಬದುಕಿನಲ್ಲಿ ಕಳೆದು ಹೋದವನಿಗೆ ಪ್ರಿಯಾ ವಾರಿಯರ್ ಕಣ್ಣು ಹೊಡೆದ ಮೋಹಕತೆ ಹಾಗೂ ಅದರ ಒಟ್ಟಾರೆ ಫಂಡಾ ಗೊತ್ತೇ ಆಗಲಿಲ್ಲ. ಆಕೆಯ ಹೆಸರಿನವಳೊಬ್ಬಳಿದ್ದಾಳೆ, ಅವಳು ಹೀಗೆ ಒಂದೇ ದಿನದಲ್ಲಿ ಖ್ಯಾತಿ ಪಡೆಯುತ್ತಿದ್ದಾಳೆ, ಜನರು ಅವಳನ್ನು ಇದ್ದಕ್ಕಿದ್ದಂತೆ ಆರಾಧಿಸತೊಡಗಿದ್ದಾರೆ ಎಂಬ ಜನಸಾಮಾನ್ಯನಿಗೆ ತಿಳಿಯಲು ಹೇಗೆ ಸಾಧ್ಯ? ಎಲ್ಲವೂ ಎಲ್ಲರಿಗೂ ಆಸಕ್ತಿ ಕೆರಳಿಸಬೇಕು ಎಂದಲ್ಲ. ಆದರೆ ದೇಶದ ಕೆಲ ಆಗುಹೋಗುಗಳು ಕೆಲ ವರ್ಗದವರ ಪ್ರಜ್ಞೆಗೂ ತಲುಪುವುದಿಲ್ಲ ಎಂಬುದು ಸೋಜಿಗದ ಸಂಗತಿ. ಇದನ್ನೇ ಅಸಮಾನತೆ ಎಂದಿದ್ದು. ನಾವಿದನ್ನು ಸೋಷಿಯಲ್ ಮೀಡಿಯಾ ಅಸಮಾನತೆ ಎನ್ನಬಹುದು. ಒಂದೇ ದಿನದಲ್ಲಿ ಲಕ್ಷಾಂತರ ಫಾಲೋವರ್‌ಸ್ಗಳನ್ನು ಹೊಂದುವುದು ಸಾಧನೆ ಎಂಬ ಪರಿಕಲ್ಪನೆ ಜನಸಾಮಾನ್ಯ ನಿಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಆತನಿಗೆ ವರ್ಷಕ್ಕೆ ಲಕ್ಷ ಗಳಿಸುವುದೇ ಸವಾಲಾಗಿರುತ್ತದೆ.

ಇಷ್ಟಕ್ಕೂ ಅದೊಂದು ಸಾಧನೆ ನನಗೂ ಅನಿಸುತ್ತಿಲ್ಲ. ಈ ದೇಶದಲ್ಲಿ ಅತಿಹೇಯವಾಗಿ ರೇಪ್ ಮಾಡಿ ಜೈಲಿನಿಂದ ಹೊರಬಂದವ ನಿಗೂ ಫಾಲೋವರ್ಸ್ ಇರುತ್ತಾರೆ. ಬಿಗ್‌ಬಾಸಿನಲ್ಲಿ ಗೆದ್ದವನಿಗೆ ಹೊರಬರುವಷ್ಟರಲ್ಲಿ ಲಕ್ಷಾಂತರ ಮಂದಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿರುತ್ತಾರೆ. ಪಾರ್ಲಿಮೆಂಟಿನಲ್ಲಿ ಗಹಗಹಿಸಿ ನಕ್ಕರೂ ಜನ ಫಾಲೋ ಮಾಡುತ್ತಾರೆ, ಉದ್ರೇಕಕಾರಿಯಾಗಿ ಭಾಷಣ ಮಾಡಿದರೂ ಸಾಕು ಜನ ಬೆಂಬಲಿಗರಾಗಿ ಬಿಡುತ್ತಾರೆ. ಒಟ್ಟಿನಲ್ಲಿ ಯಾರು ಏನೇ ಮಾಡಿದರೂ ನಾವು ಪ್ರತಿಕ್ರಿಯಿಸುವವರು, ಅದಕ್ಕೆಂದೇ ಇಲ್ಲಿರುವವರು ಎಂಬಂತೆ ಆಡತೊಡಗಿದ್ದಾರೆ ನೆಟ್ಟಿಗರು. ಇದು ನಿಜಕ್ಕೂ ಶೋಚನೀಯ.

ಹಾಗೆ ನೋಡಿದಲ್ಲಿ ಪ್ರಿಯಾವಾರಿಯರ್ ತನ್ನದೇ ವಯಸ್ಸಿನ ಹುಡುಗನನ್ನು ನೋಡಿ ಕಣ್ಣು ಹೊಡೆದಿದ್ದು. ಸಿನಿಮಾ ಇತಿಹಾಸ ದಲ್ಲೇ ಅಷ್ಟು ಸುಂದರವಾಗಿ ಯಾರೂ ಕಣ್ಣು ಹೊಡೆದಿಲ್ಲ ಎಂಬಂತೆ ಜನ ಆಕೆಯನ್ನು ಪ್ರಶಂಸಿಸಿಬಿಟ್ಟರು. ‘ವಿಂಕ್‌ಗರ್ಲ್’ ಎಂದು ಹೆಸರಿಟ್ಟರು. ಅಲ್ಯಾರೋ ಮೌಲ್ವಿ ಕಣ್ಣು ಮುಚ್ಚಿದರೆ ಆಕೆಯ ಮುಖವೇ ಕಣ್ಣೆದುರು ಬರುತ್ತದೆ, ಹೀಗಾಗಿ ಆಕೆಯ ವಿರುದ್ಧ ಫತ್ವಾ ಕೂಡ ಹೊರಡಿಸಿಬಿಟ್ಟರು! ಇದಕ್ಕಿಂತ ಅತಿರೇಕ ಇನ್ನೊಂದಿದೆಯೆ? ಆಕೆ ಸಿನಿಮಾ ಅಭಿನಯದ ಭಾಗವಾಗಿ ಆ ದೃಶ್ಯದಲ್ಲಿ ನಟಿಸಿರುತ್ತಾಳೆ. ಅದು ಇಷ್ಟರಮಟ್ಟಿಗೆ ಜನರಿಗೆ ಪ್ರಿಯವಾಗಿ ಬಿಡುತ್ತದೆ, ತಾನು ಈ ಪರಿ ಜನಪ್ರಿಯವಾಗಿ ಬಿಡುತ್ತೇನೆ ಎಂದು ಆಕೆಗೇ ಗೊತ್ತಿರಲಿಕ್ಕಿಲ್ಲ.

ಏನಿದೆ ಪ್ರಿಯಾ ವಾರಿಯರ್ ಹಾಡಿನಲ್ಲಿ? ದೇಶವೇ ತಿರುಗಿ ನೋಡುವಂತೆ ಕಣ್ಣು ಹೊಡೆದಳಾ ಹಾಗಾದರೆ? ಎಷ್ಟೊಂದು ನಟನಟಿಯರು ಇದಕ್ಕಿಂತ ಉತ್ಕೃಷ್ಟವಾದ ಅಭಿನಯ ನೀಡಿದ್ದಿದೆ. ಪಾತ್ರವೇ ತಾವಾಗಿ ಹೋಗಿ, ಜನರನ್ನು ಹುಚ್ಚೆಬ್ಬಿಸಿದ ಎಷ್ಟು ನಟರು ನಮ್ಮ ನಡುವೆಯೇ ಇದ್ದಾರೆ. ಆದರೆ ಕೆಲವೇ ನಿಮಿಷಗಳ ವೀಡಿಯೋ ಒಂದು ಈ ಪರಿ ಜನರನ್ನು ಸೆಳೆಯುತ್ತದೆ ಎಂದರೆ ನಿಜಕ್ಕೂ ಜನರಿಗೆ ಏನು ಬೇಕು ಎಂಬುದರ ಗೊಂದಲವಾಗುತ್ತದೆ. ಜನರು ಏನನ್ನು ಇಷ್ಟಪಡುತ್ತಾರೆ ಎನ್ನುವುದನ್ನು ಹೇಳುವುದೇ ಕಷ್ಟ. ನಮ್ಮ ರಾಜಕುಮಾರ್ ಅಣ್ಣಾವ್ರಾಗಿ ಬೆಳೆಯುವಾಗ ಸನಾದಿ ಅಪ್ಪಣ್ಣರಾಗಬೇಕಾಯಿತು, ಕವಿರತ್ನ ಕಾಳಿದಾಸನಾಗ ಬೇಕಾಯಿತು, ಬಬ್ರುವಾಹನನಾಗಬೇಕಾಯಿತು, ಬಂಗಾರದ ಮನುಷ್ಯನಾಗಬೇಕಾಯಿತು.

ಅದೊಂದು ಗೆಲುವಿನ ನಿರಂತರ ಪ್ರಯಾಣವಾಗಿತ್ತು. ಆಗೇನಾದರೂ ಈ ಜಾಲತಾಣಗಳಿದ್ದು ಬಿಟ್ಟಿದ್ದರೆ, ಅಣ್ಣಾವ್ರು ವರ್ಷವಿಡೀ ಟ್ರೆಂಡ್ ಸೆಟ್ಟರ್ ಆಗಿಯೇ ಉಳಿದು ಬಿಡುತ್ತಿದ್ದರೇನೋ! ಬಬ್ರುವಾಹನದ ‘ಏನು ಪಾರ್ಥ’ ಎಂಬ ಒಂದೇ ಡೈಲಾಗ್ ಸಾಕಿತ್ತು ಕೋಟ್ಯಂತರ ಫಾಲೋವರ್ಸ್ ಗಳಿಸಲು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಜಗತ್ತು ತೀವ್ರ ಪ್ರತಿಕ್ರಿಯಿಸುತ್ತದೆ. ಯಶಸ್ಸಿನ ಮಾನದಂಡ ಬದಲಾಗಿದೆ. ಇಂದು ಟ್ವಿಟರ್‌ನಲ್ಲಿ ಒಂದು ಲಕ್ಷ ಅನುಯಾಯಿಗಳು ಆದರೆ ಪತ್ರಿಕೆಗಳು ಸುದ್ದಿ ಮಾಡುತ್ತವೆ. ಜಗತ್ತಿನ ಯಾವ ನಾಯಕರಿಗೆ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇದ್ದಾರೆ? ಯಾರು ಅತಿ ವೇಗದಲ್ಲಿ ಸ್ಪಂದಿಸು ತ್ತಾರೆ? ಯಾರು ಟ್ವಿಟರ್‌ನಿಂದ ಹೊರಬಂದರು? ಅವರಿಗೆ ಎಷ್ಟು ಫಾಲೋವರ್ಸ್ ಇದ್ದರು? ಇವೆಲ್ಲ ಇಂದು ಬಹಳ ಮುಖ್ಯವಾದ ಸಂಗತಿಗಳು. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಫಾಲೋವರ್‌ಸ್ನ ಸಂಪಾದಿಸುವುದು ಕೂಡ ಇಂದಿನ ಸಾಧನೆಯ ಒಂದು ಭಾಗವೇ! ಇದಕ್ಕೇನನ್ನೋಣ? ಪ್ರಿಯಾ ವಾರಿಯರ್ ಯಾಕೆ ಈ ಪರಿ ಜನಪ್ರಿಯಳಾಗಿದ್ದು? ಸೋಷಿಯಲ್ ಮೀಡಿಯಾ ದಲ್ಲಿದ್ದವರಲ್ಲಿ ಹೆಚ್ಚಿನವರು ಯುವಕರು. 18 ರಿಂದ 30ರೊಳಗಿನವರು.

ಇವರೆಲ್ಲ ಈಗಷ್ಟೆ ತಮ್ಮ ಯೌವನದ ಮಜಲುಗಳನ್ನು ದಾಟುತ್ತಿರುವವರು. ತಮ್ಮ ಟೀನೇಜ್ ದಿನಗಳ ನೆನಪು ಅವರಲ್ಲಿನ್ನೂ ಹಸಿ ಯಾಗಿದೆ. ಹೀಗಾಗಿ ವೀಡಿಯೋದಲ್ಲಿನ ದೃಶ್ಯದೊಡನೆ ಬೇಗ ಕನೆಕ್ಟ್ ಮಾಡಿಕೊಂಡರು ಎನಿಸುತ್ತದೆ. ಯಾವಾಗಲೂ ಎಳೆ ವಯಸ್ಸಿನ ಪ್ರೇಮ ಮಧುರ. ಇಳಿ ವಯಸ್ಸಿನಲ್ಲಿ ಕೂಡ ಆ ಪ್ರೇಮಿ ನೆನಪಲ್ಲಿರುತ್ತಾನೆ/ಳೆ.

ಹೀಗಾಗಿ ಜಾಲತಾಣಿಗರ ಒಂದೊಳ್ಳೆ ಅನುಭವದ ಭಾಗವನ್ನು ಪ್ರಿಯಾ ಎನ್ನುವ ಟೀನೇಜ್ ಹುಡುಗಿ ಕೆದಕಿದಳು ಎನಿಸುತ್ತದೆ. ಆಕೆ ಕಣ್ಣು ಹೊಡೆದಿದ್ದನ್ನು ನೋಡಿದವರು ತಮ್ಮ ಮಧುರ ನೆನಪುಗಳಿಗೆ ಜಾರಿರಬಹುದು ಹಾಗೂ ಅವಳನ್ನು ತಮ್ಮ ಪ್ರತಿನಿಧಿಯಂತೆ ಕಂಡಿರಬಹುದು. ಯಾವಾಗಲೂ ಹದಿವಯಸ್ಸಿನ ಪ್ರೇಮಕಥೆಗಳು ಹಿಟ್ ಆಗಿವೆ. ಅದೇ ಕಾರಣಕ್ಕೇ ಕನ್ನಡದ ‘ಚೆಲುವಿನ ಚಿತ್ತಾರ’ ಓಡಿದ್ದು, ಹಿಂದಿಯ ‘ಏಕ್‌ದುಜೇಕೇಲಿಯೇ’ ಯಶಸ್ಸು ಕಂಡಿದ್ದು, ತಮಿಳಿನ ‘ಅಲೈಪಾಯುದೆ’ ಜನಪ್ರಿಯವಾಗಿದ್ದು ಧನುಷ್‌ನ ‘ಕೊಲೆವರಿ ಡಿ’ ಹಾಡನ್ನು ಜಗತ್ತೇ ಹಾಡಿದ್ದು. ಇದಕ್ಕೆಲ್ಲ ಕಾರಣ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಯುವಪಡೆ.

ಸೋಷಿಯಲ್ ಮಂದಿ ಎಲ್ಲದಕ್ಕೂ ರಿಯಾಕ್ಟ್ ಮಾಡುತ್ತಾರೆ ಎನ್ನುವ ಆಪಾದನೆಯಿದೆ. ಇದು ನಿಜವೂ ಇರಬಹುದು. ಕಾರಣ ಅನಿಸಿದ್ದೆಲ್ಲಾ ಹೇಳಲು ಅವರ ಕೈಲೊಂದು ಮಾಧ್ಯಮವಿದೆ.ಅವರ ಹೇಳಿಕೆಗಳಿಗೆ ಒಂದಿಷ್ಟು ಮನ್ನಣೆಯೂ ಸಿಗುತ್ತದೆ. ಆದರೆ ಇದ್ಯಾವುದರ ಗೋಜಿಗೆ ಹೋಗದವರೂ ನಮ್ಮೊಡನೆ ಬದುಕುತ್ತಿದ್ದಾರೆ. ಅವರಿಗೆ ಟ್ರೆಂಡ್‌ಗಳು ಗೊತ್ತಿಲ್ಲ, ನ್ಯೂಸ್ ವೈರಲ್ ಎಂಬ ಪದದ ಪರಿಚಯವಿರುವುದಿಲ್ಲ, ಫಾಲೋವರ್ಸ್ ಎಂದರೆ ಅರ್ಥವಾಗಲ್ಲ. ತಡವಾಗಿ ಅಪ್‌ಡೇಟ್ ಆಗುತ್ತಾರೆ. ಆದರೂ ನೆಮ್ಮದಿ ಯಿಂದ ಬದುಕುತ್ತಿದ್ದಾರೆ. ಅವರ ಮಕ್ಕಳೂ ಓದುತ್ತಿದ್ದಾರೆ, ಡಿಗ್ರಿ ಗಳಿಸುತ್ತಿದ್ದಾರೆ, ಕೆಲಸ ಹಿಡಿಯುತ್ತಿದ್ದಾರೆ. ಹೇಳಿ, ಸೋಷಿಯಲ್ ಮೀಡಿಯಾದಲ್ಲಿ ಇರದಿದ್ದರೆ ಬದುಕು ವ್ಯರ್ಥವೆ? ಫಾಲೋವರ್ಸ್ ಗಳಿಸುವುದೇ ಸಾಧನೆಯೇ? ವೈರಲ್ ಆದರೆ ಮಾತ್ರ ಬದುಕು ಸಾರ್ಥಕವೆ? ನೀವೇ ನಿರ್ಧರಿಸಿ.

One thought on “ಅವಳು ಕಣ್ಣು ಹೊಡೆದು ಗಳಿಸಿದ್ದು ಏನನ್ನು?

Leave a Reply

Your email address will not be published. Required fields are marked *

nineteen + three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top