ಪ್ರಜಾಪ್ರಭುತ್ವವೆಂಬುದು ಒಂದು ಅಪರಿಮಿತ  ಸಾಧ್ಯತೆಗಳ ಅಗಣಿತ ಅವಕಾಶ

Posted In : ಅಂಕಣಗಳು, ನೂರೆಂಟು ವಿಶ್ವ

ಪ್ರಜಾಪ್ರಭುತ್ವದ ಮೂಲ ಲಕ್ಷಣವೆಂದರೆ ಬಹುತ್ವ. ಎಲ್ಲವನ್ನೂ ಒಳಗೊಳ್ಳುವ ಗುಣ. ಪ್ರತಿಯೊಬ್ಬರಿಗೂ ಅವಕಾಶ ಕೊಡುವ ಒಂದು ಅದ್ಭುತ ಸಾಧ್ಯತೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಇಂದು ಸಾಮಾನ್ಯ ಮನುಷ್ಯನಾಗಿರುವವನು ನಾಳೆ ಮುಖ್ಯಮಂತ್ರಿಯಾಗಬಹುದು. ಇಂದು ಪ್ರಧಾನಿಯಾದವನು ನಾಳೆ ಹೇಳ ಹೆಸರಿಲ್ಲದಂತಾಗಬಹುದು. ಜಾತಿಯೇ ಇಲ್ಲದವನು ಆರಿಸಿ ಬಂದು ಉನ್ನತ ಅಧಿಕಾರ ಗಿಟ್ಟಿಸಿಕೊಳ್ಳಬಹುದು. ಪ್ರಬಲ ಜಾತಿಯಾದವನು ಸೋಲಬಹುದು. ಬಹುಮತ ಸಿಗದವನು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬಹುದು. ಅಲ್ಪಮತ ಪಡೆದವನು ಚುಕ್ಕಾಣಿ ಹಿಡಿಯಬಹುದು. ಜನರ ಮಧ್ಯದಲ್ಲಿಯೇ ಇರುವವನನ್ನು ಮತದಾರ ತಿರಸ್ಕರಿಸಬಹುದು, ಜೈಲಿನಲ್ಲಿ ಕುಳಿತ ಅಭ್ಯರ್ಥಿಯನ್ನು ಜನ ಆರಿಸಿ ತರಬಹುದು. ತಂದೆ-ಮಗ ಪರಸ್ಪರ ಸ್ಪರ್ಧಿಸಬಹುದು.

ಇವರಿಬ್ಬರನ್ನೂ ತಿರಸ್ಕರಿಸಿ ಅವರ ಮನೆಯಲ್ಲಿದ್ದ ಆಳನ್ನು ಜನ ಚುನಾಯಿಸಬಹುದು. ವಿದ್ವಾಂಸರನ್ನು ತಿರಸ್ಕರಿಸಿ ಅಕ್ಷರಶತ್ರುವಿಗೆ ಅಧಿಕಾರವನ್ನು ಕೊಡಬಹುದು. ಪರಮ ಸಂಭಾವಿತನನ್ನು ಸೋಲಿಸಿ, ಶುದ್ಧ ಲಜ್ಜೆಗೇಡಿಯನ್ನು ಆರಿಸಬಹುದು. ಡಕಾಯಿತರು, ಮಾಫಿಯಾ ಡಾನ್‌ಗಳು, ಕೊಲೆಗಡುಕರು, ಸಮಾಜದ್ರೋಹಿಗಳು, ಪರಮನೀಚರು, ಲೋಕ ನಿಂದಕರು, ಭ್ರಷ್ಟರು, ಅತ್ಯಾಚಾರಿಗಳು, ಲುಚ್ಚಾಗಳ ಕೈಗೆ ಕೂಡ ಅಧಿಕಾರ ಕೊಡಬಹುದು.  ಒಂದು ಅಪರಿಮಿತ ಸಾಧ್ಯತೆಗಳ ಅಗಣಿತ ಅವಕಾಶ. ಇಲ್ಲಿ ಯಾವುದೂ ಎಣಿಕೆಯಂತೆ ಆಗುವುದಿಲ್ಲ. ನಿರೀಕ್ಷೆಯಂತೆ ಯಾವುದೂ ಜರುಗುವುದಿಲ್ಲ. ಕಾರಣ ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಇಲ್ಲಿ ನೀಚ-ಉಚ್ಚ, ಬಡವ-ಬಲ್ಲಿದ, ಸುಶಿಕ್ಷಿತ-ಅನಕ್ಷರಸ್ಥ, ಗಂಡು-ಹೆಣ್ಣು, ಸಂಭಾವಿತ-ಲಫಂಗ ಎಂಬ ಭೇದವಿಲ್ಲ. ಇಲ್ಲಿ ಎಲ್ಲರೂ ಸಮಾನರು. ಕೆಲವರು ಹೆಚ್ಚು ಸಮಾನರಿರಬಹುದು. ಆದರೆ ಅವರನ್ನು ಮಟ್ಟಸವಾಗಿಸುವ ತಾಕತ್ತು ಪ್ರಜಾಪ್ರಭುತ್ವಕ್ಕಿದೆ. ಕೆಲವರು ದೀರ್ಘ ಅವಧಿಗೆ ಅಧಿಕಾರದಲ್ಲಿದ್ದಿರಬಹುದು. ಆದರೆ ಅಧಿಕಾರವೆಂಬುದು ಶಾಶ್ವತ ಅಲ್ಲ ಎಂಬುದೂ ಅಷ್ಟೇ ನಿಜ.

ಉತ್ತಮ ಆಡಳಿತ ಪುನರಾಯ್ಕೆ ಆಗುತ್ತಾರೆ ಎಂಬುದೂ ಸುಳ್ಳು. ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡರೆ, ಜೈಲಿಗೆ ಹೋದರೆ ಜನ ಶಾಶ್ವತವಾಗಿ ತಿರಸ್ಕರಿಸಿಬಿಡುತ್ತಾರೆ ಎಂಬುದೂ ಸುಳ್ಳು. ಅಂಥವರಿಗೆ ಪುನಃ ಕರೆದು ಅಧಿಕಾರ ಕೊಡಬಹುದು. ಪದೇಪದೆ ಸೋತವರನ್ನು ಕೈಹಿಡಿದು ಕರೆಯಬಹುದು. ಪದೇಪದೆ ಗೆದ್ದವರನ್ನು ಖಾಯಂ ಮನೆಗೆ ಕಳಿಸಬಹುದು. ಸೋಲೇ ಇಲ್ಲದಂತೆ ಆರಿಸಿ ತಂದವರನ್ನೇ ಪುನಃ ಪುನಃ ಆರಿಸಿ ತರಬಹುದು. ಉನ್ನತ ಸ್ಥಾನಕ್ಕೆ ಏರಿದ್ದಿರಬಹುದು. ಆದರೆ ಅವರಿಗೆ ಚುನಾವಣೆಯಲ್ಲಿ ದಯನೀಯ ಸೋಲುಂಟಾಗುವಂತೆ ಮಾಡಿರಬಹುದು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರು ಕಡಿಮೆ ಸೀಟು ಗಳಿಸಿದವರ ಮುಂದೆ ಮಂಡಿಯೂರಬೇಕಾಗಬಹುದು. ಹಾಗಾದರೆ ಈ ಪ್ರಜಾಪ್ರಭುತ್ವ ಅಂದರೆ ಏನು? ಏನಿದರ ಮರ್ಮ? ಏನಿದರ ಹಕೀಕತ್ತು?

ಸಮಾಧಾನದ ಮತ್ತು ದುಃಖದ ಸಂಗತಿಯೆಂದರೆ, ಈ ಪ್ರಶ್ನೆಗೆ ಉತ್ತರ ಮಾತ್ರ ಯಾರಿಗೂ ಗೊತ್ತಿಲ್ಲ. ಕೆಲವರು ಶಾಸಕರಾಗಲು, ಸಂಸದರಾಗಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಹತ್ತಾರು ಕೋಟಿ ರುಪಾಯಿ ಖರ್ಚು ಮಾಡುತ್ತಾರೆ. ಯಾರಯಾರದ್ದೋ ಮನೆ ಬಾಗಿಲು ಬಡಿಯುತ್ತಾರೆ, ಕಾಲು ಹಿಡಿಯುತ್ತಾರೆ, ಹಲ್ಲುಗಿಂಜುತ್ತಾರೆ. ಇನ್ನು ಕೆಲವರಿಗೆ ಪದವಿ, ಅಧಿಕಾರ ಅಯಾಚಿತವಾಗಿ ಬರುತ್ತದೆ. ಬೇಡ ಹುಡುಕಿಕೊಂಡು ಬರುತ್ತದೆ. ಸಾಕು ಅಂದರೂ ಅವರ ಕಾಲ ಬಳಿಯೇ ಬಿದ್ದಿರುತ್ತದೆ.

ಪ್ರಧಾನಿ ನರಸಿಂಹರಾವ್ ಅವರು ಪ್ರಧಾನಿಯಾಗಿ, ತಮ್ಮ ಸಚಿವ ಸಂಪುಟ ರಚನೆಯ ಕಸರತ್ತು ನಡೆಸಿದಾಗ, ಅವರಿಗೊಂದು ಯೋಚನೆ ಬಂತು. ಆಗ ‘ಯೂನಿವರ್ಸಿಟಿ ಗ್ರಾಂಟ್ ಕಮಿಷನ್’ ಅಧ್ಯಕ್ಷರಾಗಿದ್ದ ಡಾ.ಮನಮೋಹನ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿದರೆ ಹೇಗೆ? ಪ್ರಧಾನಿ ತಮ್ಮ ಪ್ರಿನ್ಸಿಪಲ್ ಸೆಕ್ರೆಟರಿ ಅವರನ್ನು ಡಾ.ಸಿಂಗ್ ಹತ್ತಿರ ಕಳಿಸಿದರು. ‘ನೀವು ಹಣಕಾಸು ಮಂತ್ರಿಯಾಗಬೇಕೆಂದು ಪ್ರಧಾನಿ ಬಯಸಿದ್ದಾರೆ’ ಎಂದು ಪ್ರಿನ್ಸಿಪಲ್ ಸೆಕ್ರೆಟರಿ ಆದರೆ ಅದನ್ನು ಡಾ.ಸಿಂಗ್ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಎರಡು ದಿನಗಳ ನಂತರ, ಸ್ವತಃ ಪ್ರಧಾನಿ ರಾವ್ ಅವರೇ ತುಸು ಕೋಪದಿಂದಲೇ, ತಕ್ಷಣ ಸಿದ್ಧರಾಗಿ, ರಾಷ್ಟ್ರಪತಿ ಭವನಕ್ಕೆ ಬಂದು ಪ್ರಮಾಣವಚನ ಸೀಕರಿಸುವಂತೆ ಆದೇಶಿಸಿದರು.

ಡಾ.ಸಿಂಗ್ ರಾಜಕೀಯ ಪ್ರವೇಶಿಸಿದ್ದು ಹಾಗೆ. ಎಲ್ಲರೂ ರಾಜಕೀಯ ಪ್ರವೇಶಿಸಿ, ಶಾಸಕ, ಸಂಸದರಾಗಿ ಮಂತ್ರಿಯಾದರೆ, ಇವರದು ಉಲ್ಟಾ. ಮಂತ್ರಿಯಾಗಿ ರಾಜಕೀಯ ಸೇರಿದರು. ಆನಂತರ ರಾಜ್ಯಸಭೆ ಸದಸ್ಯರಾದರು. ಅಲ್ಲಿಂದ(1991ರಿಂದ) ಇವರು ಇಲ್ಲಿತನಕ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ, ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ಸರಕಾರ ರಚನೆಗೆ ಆಹ್ವಾನ ನೀಡುವಂತೆ ಕೋರಿದಾಗ, ಅವರ ವಿದೇಶಿ ಮೂಲದ ಹಿನ್ನೆಲೆಯಲ್ಲಿ ಅವಕಾಶ ನಿರಾಕರಿಸಲಾಯಿತು. ಆಗ ಸೋನಿಯಾ ಅವರು ಪ್ರಧಾನಿಯಾಗುವಂತೆ, ಡಾ.ಸಿಂಗ್ ಅವರನ್ನು ಕೋರಿದಾಗ, ಅವರು ನಯವಾಗಿ ತಿರಸ್ಕರಿಸಿದರು. ಆದರೂ ಸೋನಿಯಾ ಕೇಳದಿದ್ದಾಗ, ಡಾ.ಸಿಂಗ್ ಚಿಂತಿಸಲು ಎರಡು ದಿನಗಳ ಅವಕಾಶ ಕೇಳಿದರು. ಆನಂತರವೂ ಅವರ ಬದಲಾಗಿರಲಿಲ್ಲ. ಆದರೆ ಸೋನಿಯಾ ಒತ್ತಾಯ, ಒತ್ತಡಕ್ಕೆ ಮಣಿದು ಪ್ರಧಾನಿಯಾಗಲು ಒಲ್ಲದ ಮನಸ್ಸಿನಿಂದ ಒಪ್ಪಿದರು. ಬೇಡ, ಬೇಡ, ಒಲ್ಲೆ, ಜಪ್ಪಯ್ಯ ಬೇಡ ಎಂದರೂ ಪ್ರಧಾನಿ ಹುದ್ದೆ ಅವರನ್ನು ಹುಡುಕಿಕೊಂಡು ಬಂದಿತು. ಒಂದು ಅವಧಿ ಪೂರೈಸಿದ ಬಳಿಕ, ಈ ಪದವಿ ಸಾಕು ಎಂದರು. ಆದರೂ ಕೇಳಲಿಲ್ಲ ಪಾರ್ಟಿ ಹೈಕಮಾಂಡ್.

ನೀವೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಿರಿ ಎಂದರು. ಮತ್ತೆ ಐದು ವರ್ಷಗಳ ಅವಧಿಗೆ ಅವರೇ ಪ್ರಧಾನಿಯಾದರು. ಪಂಚಾಯ್ತಿ ಅಧ್ಯಕ್ಷನ ಸ್ಥಾನವನ್ನೂ ಯಾರೂ ಈ ಹರಿವಾಣದಲ್ಲಿಟ್ಟು ಕೊಡುವುದಿಲ್ಲ. ಹಾಗಿರುವಾಗ ಈ ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನ ಮಂತ್ರಿ ಪದವಿ ಬೇಡ ಬೇಡ ಅಂದರೂ ಒಲಿದು ಬಂದಿದ್ದಷ್ಟೇ ಅಲ್ಲ, ಅನಾಮತ್ತು ಹತ್ತು ವರ್ಷಗಳ ಕಾಲ ಅವರಿಗೇ ಮೀಸಲಾಗಿತ್ತು. ಅವರಿಗೆ ಪೈಪೋಟಿಯೇ ಇರಲಿಲ್ಲ.. ಇಂಥ ಪದವಿ ಪಡೆಯಲು ಎಷ್ಟು ಸಾಹಸ ಮಾಡಬೇಕೋ, ಅದನ್ನು ಕಾಪಾಡಲು ಮತ್ತಷ್ಟು ಹೆಣಗಬೇಕು. ಆದರೆ ಡಾ.ಸಿಂಗ್‌ಗೆ ಇದಾವುದರ ಭಯವೇ ಇರಲಿಲ್ಲ. ತಮ್ಮ ವಿರುದ್ಧ ಒಳಸಂಚು, ಕಾರಸ್ಥಾನ ನಡೆಯಬಹುದು ಎಂಬ ಸಣ್ಣ ಸಂದೇಹವೂ ಅವರಿಗಿರಲಿಲ್ಲ. ಅವರಷ್ಟು ನಿಶ್ಚಿಂತೆ, ನಿರಾಳ, ನಿರ್ಭಾವುಕರಾಗಿ ಯಾರೂ ಇದ್ದಿರಲಾರರು. ಯಾರಾದರೂ ತಮ್ಮ ಭಾರ ಇಳಿಸಿದರೆ ಸಾಕು, ತಮ್ಮ ಹುದ್ದೆ ನಿಭಾಯಿಸಿದರೆ ಸಾಕು ಎಂದೇ ಅವರು ಯೋಚಿಸುತ್ತಿದ್ದರು.

1991ರ ಲೋಕಸಭಾ ಚುನಾವಣೆಯ ಫಲಿತಾಂಶ ವಿಚಿತ್ರವಾಗಿತ್ತು. ಕಾಂಗ್ರೆಸ್ 244 ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು. ಬಿಜೆಪಿ 120 ಸ್ಥಾನಗಳಲ್ಲಿ ಗೆದ್ದಿತ್ತು. ಯಾವ ಪಕ್ಷಕ್ಕೂ ಬಹುಮತ ಪ್ರಾಪ್ತವಾಗಿರಲಿಲ್ಲ. ಅದಕ್ಕೂ ಮುನ್ನ ಕೇಂದ್ರದಲ್ಲಿ ಸಚಿವರಾಗಿದ್ದ ಪಿ.ವಿ.ನರಸಿಂಹರಾವ್ ಅವರು ರಾಜಕೀಯ ನಿವೃತ್ತಿ ಘೋಷಿಸಿಬಿಟ್ಟಿದ್ದರು. ಅಷ್ಟೇ ಅಲ್ಲ. ದೆಹಲಿಯಿಂದ ತಮ್ಮ ತವರು ಆಂಧ್ರದ ಹೈದರಾಬಾದ್‌ಗೆ ಹೋಗಿ ಅಲ್ಲಿಯೇ ತಮ್ಮ ನಿವೃತ್ತಿ ಜೀವನವನ್ನು ಸಾಗಿಸಲು ಸಾಮಾನು-ಸರಂಜಾಮುಗಳ ಸಹಿತ ವರ್ಗವಾಗಿದ್ದರು. ಅವರಿಗೆ ರಾಜಕೀಯ ಆಕಾಂಕ್ಷೆಯೂ ಇರಲಿಲ್ಲ. ಅವಕಾಶವೂ ಇರಲಿಲ್ಲ. ಹಾಗಿರುವಾಗ ಪ್ರಧಾನಿ ಪಟ್ಟ ಅವರನ್ನು ಹುಡುಕಿಕೊಂಡು ಹೋಯಿತು. ಐದು ವರ್ಷಗಳ ಕಾಲ ಅವರು ಈ ದೇಶದ ಪ್ರಧಾನಿಯಾಗಿದ್ದರು.
***
ಪ್ರಜಾಪ್ರಭುತ್ವದ ಅಂತರಂಗ ಬಲ್ಲವರಾರು?
ಸಾಮಾನ್ಯವಾಗಿ, ಪಕ್ಷೇತರರ ಸಹಾಯ ಅಥವಾ ಬೆಂಬಲದೊಂದಿಗೆ ಸರಕಾರ ರಚಿಸುವುದು ಸಂಪ್ರದಾಯ. ಆದರೆ ಪಕ್ಷೇತರನೇ ಮುಖ್ಯಮಂತ್ರಿಯಾಗುವುದನ್ನು ಕೇಳಿದ್ದೀರಾ? 1971ರಲ್ಲೇ ಒಡಿಶಾದಲ್ಲಿ ವಿಶ್ವನಾಥ ಎಂಬ ಪಕ್ಷೇತರ ಅಭ್ಯರ್ಥಿ ಮುಖ್ಯಮಂತ್ರಿ ಆಗಿದ್ದರು. ಅಲ್ಲಿಯವರೆಗೆ ಅಂಥದ್ದೊಂದು ಪವಾಡ ಘಟಿಸಿರಲಿಲ್ಲ. ಪ್ರಾಯಶಃ ರಾಜ್ಯಪಾಲರಾದ ಬಳಿಕ (1962ರಿಂದ 1967ರ ವರೆಗೆ ಅವರು ಉತ್ತರಪ್ರದೇಶದ ರಾಜ್ಯಪಾಲರಾಗಿದ್ದರು.) ಮುಖ್ಯಮಂತ್ರಿಯಾದ ಪ್ರಪ್ರಥಮ ಹಾಗೂ ಏಕೈಕ ವ್ಯಕ್ತಿಯಾಗಿರಬೇಕು. 1971ರಲ್ಲಿ ಒಡಿಶಾ ವಿಧಾನಸಭೆ ಚುನಾವಣೆ ನಂತರ ಯಾವ ಪಕ್ಷಕ್ಕೂ ಬಹುಮತ ಬರದಿದ್ದಾಗ, ಉತ್ಕಲ್ ಕಾಂಗ್ರೆಸ್, ಸ್ವತಂತ್ರಪಾರ್ಟಿ ಹಾಗೂ ಜಾರ್ಖಂಡ್ ಪಾರ್ಟಿ ಸೇರಿ, ಸಂಯುಕ್ತ ರಂಗ ಮೈತ್ರಿ ಸರಕಾರ ರಚಿಸಿದಾಗ ವಿಶ್ವನಾಥ ದಾಸ ಮುಖ್ಯಮಂತ್ರಿಯಾಗಿದ್ದರು. ಅವರು ಒಂದು ಎರಡು ತಿಂಗಳುಗಳ ಕಾಲ ಅಧಿಕಾರದಲ್ಲಿದ್ದರು. ಅವರಿಗೆ ಅವರದ್ದೆನ್ನುವ ಪಕ್ಷವೂ ಇರಲಿಲ್ಲ.

ನೀವು ಫ್ಲಿಂಡರ್ ಆಂಡರ್‌ಸನ್ ಖೊಂಸ್ಲಾಂ ಎಂಬುವವರ ಹೆಸರನ್ನು ಕೇಳಿರುವ ಸಾಧ್ಯತೆ ತೀರಾ ಕಮ್ಮಿಯಿರಬಹುದು. ಇವರು ಒಂದು ಕಾಲು ವರ್ಷ ಮೇಘಾಲಯದ ಮುಖ್ಯಮಂತ್ರಿಯಾಗಿದ್ದರು. ಇವರೂ ಸಹ ಪಕ್ಷೇತರರಾಗಿ ಆಯ್ಕೆಯಾಗಿ ಆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇಪ್ಪತ್ತು ವರ್ಷಗಳ ಕಾಲ, ಶಾಸಕರಾಗಿದ್ದ ಖೊಂಸ್ಲಾಂ ಕೇವಲ ಒಂದು ಬಾರಿಗೆ ಮಾತ್ರ ಹಿಲ್ ಸ್ಟೇಟ್ ಪೀಪಲ್ ಡೆಮಾಕ್ರೆಟಿಕ್ ಪಾರ್ಟಿಯಿಂದ ಆರಿಸಿ ಬಂದಿದ್ದರು. ಅದನ್ನು ಅವರು ನಾಲ್ಕು ಸಲ ಆರಿಸಿ ಬಂದಿದ್ದು ಪಕ್ಷೇತರರಾಗಿ. ಮೇಘಾಲಯ ಮುಖ್ಯಮಂತ್ರಿ ಇ.ಕೆ. ಮಾನ್‌ಲಾಂಗ್ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ರಾಜೀನಾಮೆ ನೀಡಿದಾಗ, ಕಾಂಗ್ರೆಸ್ ಹಾಗೂ ಪಿ.ಎ.ಸಂಗ್ಮಾ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಬೆಂಬಲದೊಂದಿಗೆ ಪಕ್ಷೇತರ ಸದಸ್ಯರಾಗಿದ್ದ ಖೊಂಸ್ಲಾಂ ಮುಖ್ಯಮಂತ್ರಿಯಾದರು.

ಆನಂತರ ಒಬ್ಬನೇ ಒಬ್ಬ ಸದಸ್ಯನಾಗಿ ಅಂದರೆ ಪಕ್ಷೇತರನಾಗಿದ್ದುಕೊಂಡು ಮುಖ್ಯಮಂತ್ರಿಯಾದವರೆಂದರೆ, ಮಧು ಕೋಡಾ. ಇವರು ಸುಮಾರು ಎರಡು ವರ್ಷಗಳ ಕಾಲ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದರು. ಯೋಗ್ಯರಾದವರು, ಅರ್ಹರಾದವರು ಮಾತ್ರ ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆಂದು ಭಾವಿಸಬೇಕಿಲ್ಲ. ಯಾರೇ ಆಯ್ಕೆಯಾಗಲಿ ಅವರು ಯೋಗ್ಯರೇ, ಅರ್ಹರೇ. ಆಯ್ಕೆಯಾದರೆ ಅವರು ಜನಪ್ರತಿನಿಧಿಗಳೇ. ಅವರು ಕೊಲೆಗಡುಕರೇ ಇರಲಿ, ಅತ್ಯಾಚಾರಿಗಳೇ ಆಗಿರಲಿ ಅವರಿಗೆ ಶಾಸನ ಸಭೆಗಳಲ್ಲಿ ಸ್ಥಾನವೊಂದು ಕಾದಿರುತ್ತದೆ. ಜನರಿಂದ ಚುನಾಯಿತರಾದವರೆಲ್ಲರೂ ನಮ್ಮನ್ನು ಆಳಲು ಅರ್ಹರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಡಕಾಯಿತ ರಾಣಿ ಫೂಲನ್ ದೇವಿ. ಚಂಬಲ್ ಕಣಿವೆ ಫೂಲನ್, ಒಂದೇ ಗ್ರಾಮದ ಇಪ್ಪತ್ತೆರಡು ರಜಪೂತರನ್ನು ಸಾಲಿನಲ್ಲಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸಿದ್ದು ಒಂದು ಕರಾಳ ಕತೆ.

ಈಕೆ ಮೇಲೆ ನೂರಾರು ಕೊಲೆ, ಡಕಾಯತಿ ಪ್ರಕರಣಗಳಿದ್ದವು. ಒಂದು ದಿನ ಏಕಾಏಕಿ ಫೂಲನ್ ದೇವಿ ಪೊಲೀಸರ ಮುಂದೆ ಶರಣಾದಳು. ಅದಾಗಿ ಎರಡು ವರ್ಷಗಳ ನಂತರ, 1996ರ ಲೋಕಸಭಾ ಚುನಾವಣೆ ಘೋಷಣೆ ಮುನ್ನ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ತಮ್ಮ ರಾಜಕೀಯ ವಿರೋಧಿ ವಿರುದ್ಧ ಒಬ್ಬ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದರು. ಆಗ ಅವರಿಗೆ ತೋಚಿದ್ದು ಫೂಲನ್ ದೇವಿ. ಉತ್ತರಪ್ರದೇಶದ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ಸೆಣಸಲು ಟಿಕೆಟ್ ನೀಡಿದರು. ಅದಕ್ಕೂ ಮುನ್ನ ಅವಳ ಹಾಕಿದ್ದ ಎಲ್ಲ ಕೇಸ್‌ಗಳನ್ನು ವಾಪಸ್ ಪಡೆದಿದ್ದರು. ಡಕಾಯಿತಳೊಬ್ಬಳಿಗೆ ಟಿಕೆಟ್ ನೀಡಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಆಶ್ಚರ್ಯಕರ ರೀತಿಯಲ್ಲಿ ಆಕೆ ಭರ್ಜರಿ ಗೆಲುವು ಸಾಧಿಸಿ ಸಂಸತ್ತಿನಲ್ಲಿ ಹೋಗಿ ಕುಳಿತಳು.

ಇದು ಪ್ರಜಾಪ್ರಭುತ್ವದ ಸೊಗಸುಗಾರಿಕೆ. ಒಬ್ಬ ಕೊಲೆಗಡುಕಿ, ಲೋಕನಿಂದಿತೆಯನ್ನೂ ಆರಿಸಿ ಕಳಿಸುವ ಚಾಕಚಾಕ್ಯತೆಯಿರುವುದು ಪ್ರಜಾಪ್ರಭುತ್ವಕ್ಕೆ ಮಾತ್ರ. 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇದೇ ಫೂಲನ್ ದೇವಿ, ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ, ಸೋತು ಹೋದಳು. ಮುಂದಿನ ವರ್ಷ(1999) ನಡೆದ ಚುನಾವಣೆಯಲ್ಲಿ ಪುನಃ ಫೂಲನ್ ದೇವಿ ಅಚ್ಚರಿ ಮೂಡಿಸಿದಳು. ಒಮ್ಮೆ ಸದನದಲ್ಲಿ ಆಕೆ ಮಾತನಾಡಲು ಎದ್ದು ನಿಂತಾಗ, ಪ್ರಧಾನಿ ಆದಿಯಾಗಿ ಇಡೀ ಸದನ ಮೂಕವಿಸ್ಮಿತವಾಗಿತ್ತು. ಡಕಾಯತಿ ರಾಣಿಯ ಮಾತುಗಳನ್ನು ಇಡೀ ಸದನ ಕೇಳಿಸಿಕೊಂಡಿತ್ತು. ಇದಲ್ಲವೇ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ?

ಬಿಹಾರದಂಥ ರಾಜ್ಯದ (ಮೂರು ಬಾರಿ) ಮುಖ್ಯಮಂತ್ರಿಯಾಗಿದ್ದ ರಾಬ್ಡಿ ದೇವಿ ಶುದ್ಧ ಹೆಬ್ಬೆಟ್ಟು ! ಕೇವಲ ಸಹಿ ಹಾಕುವುದಕ್ಕೆ ಮಾತ್ರ ಅವಳ ಲೇಖನಿ ಸೀಮಿತವಾಗಿತ್ತು. ಒಂದನೇ ತರಗತಿಯವರೆಗೆ ಮಾತ್ರ ಓದಿದ್ದ ರಾಬ್ಡಿ ದೇವಿ, ಮುಖ್ಯಮಂತ್ರಿಯಾಗುವವರೆಗೆ ಗಂಡನ ಮಾಡಿಕೊಂಡಿದ್ದಳು. ಅಡುಗೆಮನೆಯೇ ಅವಳ ಪ್ರಪಂಚವಾಗಿತ್ತು. ಅದರಾಚೆ ಒಂದು ಜಗತ್ತು ಇದೆ ಎಂಬುದು ಗೊತ್ತಿಲ್ಲದ ಮುಗ್ಧೆ ! ಅವಳ ಗಂಡ ಲಾಲು ಪ್ರಸಾದ ಯಾದವ್ ಜೈಲಿಗೆ ಹೋಗುವ ಪ್ರಸಂಗ ಬಂದಾಗ, ಹೆಂಡತಿಯನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳ್ಳಿರಿಸಿ ಹೋದರು. ಮುಂದಿನ ಎಂಟು ವರ್ಷಗಳ ಕಾಲ ಆಕೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು!

ಈಗಿನ ಮೋದಿಯವರ ಕೇಂದ್ರ ಸರಕಾರದಲ್ಲಿರುವ ಆರು ಜನ ಮಂತ್ರಿಗಳು ಹತ್ತನೇ ತರಗತಿಯನ್ನೂ ಓದಿದವರಲ್ಲ. ಎರಡು ವರ್ಷಗಳ ಕಾಲ ಮಂತ್ರಿಯಾಗಿ ಕೊನೆಗೆ ನೀಡಿದ ಉಮಾ ಭಾರತಿ ಅವರು ಓದಿದ್ದು ಕೇವಲ ಆರನೇ ತರಗತಿ ವರೆಗೆ. ಶಾಲೆಗೇ ಹೋಗದ ಅವೆಷ್ಟೋ ಮಂದಿ ಶಾಸಕರಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಕಳೆದ ಏಳು ದಶಕಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯರಾಗಿರುವ ಕರುಣಾನಿಧಿ ಅವರು ಓದಿದ್ದು ಹತ್ತನೇ ತರಗತಿವರೆಗೆ ಮಾತ್ರ.

ಭಾರತದ ಪ್ರಜಾಪ್ರಭುತ್ವದ ಮಜುಕೂರು ಇದು. ಇಲ್ಲಿ ಯಾರು ಏನಾದರೂ ಆಗಬಹುದು. ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪಕ್ಷ ಮೂರನೇ ಸ್ಥಾನ ಗಳಿಸಿ, ಅವರು ಮುಖ್ಯಮಂತ್ರಿಯಾದಾಗ ಅನೇಕರ ಹೊಟ್ಟೆಯಲ್ಲಿ ಕುಟ್ಟಿದಂತಾಯಿತು. ಅತಿ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿಯ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಅನೇಕರು ಬಯಸಿದರು. ಆದರೆ ಪ್ರಜಾಪ್ರಭುತ್ವದ ಸರಳ ನಿಯಮದಂತೆ, ಬಿಜೆಪಿಗೆ ಸರಳ ಬಹುಮತ ಪ್ರಾಪ್ತವಾಗಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅವರು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವಂತಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಬಹುಮತ ಪಡೆದು ಸರಕಾರ ರಚಿಸಿದವು.

ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಇದು ಪ್ರಜಾಪ್ರಭುತ್ವದ ಕ್ರೂರ ರೀತಿ ಅನೇಕ ಎಂದು ಕರೆಯುವವರು ಇದ್ದಾರೆ. ಆದರೆ ಇದು ವಾಸ್ತವ ಎಂಬುದನ್ನೂ ಮರೆಯುವಂತಿಲ್ಲ. ಒಂದು ವೇಳೆ ಈ ವ್ಯವಸ್ಥೆಗೆ ಅವಕಾಶವಿಲ್ಲದಿದ್ದರೆ, ಕೋರ್ಟುಗಳು ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಆದ್ದರಿಂದ ಕುಮಾರಸ್ವಾಮಿ ಸಿಎಂ ಆಗುವುದು ನಿಮಗೆ ಇಷ್ಟವಿಲ್ಲದಿರಬಹುದು, ಪ್ರಜಾಪ್ರಭುತ್ವಕ್ಕೆ ಅದು ಸಹ್ಯವೇ. ಪ್ರಜಾಪ್ರಭುತ್ವಕ್ಕೆ ಸಹ್ಯವಾದರೆ, ಅದು ಲೋಕಕ್ಕೆಲ್ಲ ಸಹ್ಯ ಎಂಬುದು ಅಷ್ಟೇ ಸತ್ಯ. ಒಂದು ಮಾತು ಸತ್ಯ. ಅದೇನೆಂದರೆ ಪ್ರಜಾಪ್ರಭುತ್ವಕ್ಕೆ ಇವೆಲ್ಲವನ್ನೂ ಸಹಿಸಿಕೊಳ್ಳುವ, ಇವೆಲ್ಲವನ್ನೂ ಮೀರಿ ನಿಲ್ಲುವ ಸಾಮರ್ಥ್ಯ ಇದೆ. ಅದನ್ನು ಮರೆಯಬಾರದು. ಅದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ.

Leave a Reply

Your email address will not be published. Required fields are marked *

2 × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top