ರಾಜಕಾರಣಿಗಳು ಗೆದ್ದು ಮತದಾರರು ಸೋತ ಕಥೆ-ವ್ಯಥೆ!

Posted In : ಅಂಕಣಗಳು, ನೂರೆಂಟು ವಿಶ್ವ

ಬಿಜೆಪಿಯ ದಿವಂಗತ ನಾಯಕ ಪ್ರಮೋದ ಮಹಾಜನ ಲೋಕಸಭೆಯಲ್ಲಿ ಹೇಳಿದ ಆ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಈಗ ಕರ್ನಾಟಕದಲ್ಲಿ ಉದ್ಭವವಾಗಿರುವ ಅತಂತ್ರ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ರಚಿಸಲು ಬೇಕಾಗುವಷ್ಟು ಬಹುಮತ ಬರದ ಸಂದರ್ಭ ಎದುರಾಗಿ, ಬೇರೆ ಪಕ್ಷಗಳೆಲ್ಲ ಸೇರಿ ಸಮ್ಮಿಶ್ರ ಸರಕಾರ ರಚಿಸುವ ಪ್ರಸಂಗ ಬಂದಾಗಲೆಲ್ಲ ಆ ಪ್ರಸಂಗ ಪ್ರಸ್ತುತವೆನಿಸುತ್ತದೆ. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳಲ್ಲಿ ಜಯ ಗಳಿಸಿ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

140 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಎರಡನೆ ದೊಡ್ಡ ಪಕ್ಷವಾಗಿತ್ತು. ಬಿಜೆಪಿಯ ಮಿತ್ರ ಪಕ್ಷಗಳಾದ ಶಿವಸೇನೆ 15, ಸಮತಾಪಕ್ಷ 8 ಹಾಗೂ ಹರಿಯಾಣ ವಿಕಾಸ ಪಕ್ಷ 3 ಸ್ಥಾನಗಳಲ್ಲಿ ಗಳಿಸಿತ್ತು. ಈ ಮಿತ್ರಪಕ್ಷಗಳ 26 ಸ್ಥಾನಗಳನ್ನು ಸೇರಿಸಿದರೂ, ಬಿಜೆಪಿ ಮೈತ್ರಿಕೂಟದ ಬಲ 187ಕ್ಕೆ ಸೀಮಿತವಾಗಿತ್ತು. ಸರಕಾರ ರಚಿಸುವ ಪ್ರಶ್ನೆಯೇ ಇರಲಿಲ್ಲ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯನ್ನು ಸರಕಾರ ರಚಿಸಲು ರಾಷ್ಟ್ರಪತಿಗಳು ಕರೆದರೂ, ಆ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಆಗದೆ ಅಲ್ಪ ಕಾಲದ ಸರಕಾರ ಬಿದ್ದುಹೋಯಿತು. ಆನಂತರ ತೃತೀಯ ರಂಗದ ಸರಕಾರ ಅಸ್ತಿತ್ವಕ್ಕೆ ಬಂದಿತು.

ಎಚ್.ಡಿ.ದೇವೇಗೌಡರು ಪ್ರಧಾನಿಯಾದರು. ಇದು ಕಾಂಗ್ರೆಸ್ ಬಾಹ್ಯ ಬೆಂಬಲ ಪಡೆದ, ಬಿಜೆಪಿಯೇತರ ಹಾಗೂ ಉಳಿದ ಚಿಲ್ಲರೆ ಒಟ್ಟಾಗಿ ರಚಿಸಿದ ಸರಕಾರ. ಈ ಸರಕಾರ ಅಸ್ತಿತ್ವಕ್ಕೆ ಬಂದ ಕೆಲ ದಿನಗಳಲ್ಲಿ, ಚೀನಾ ಸರಕಾರದ ಆಹ್ವಾನದ ಮೇರೆಗೆ ಭಾರತೀಯ ಸಂಸದರ ನಿಯೋಗ ಆ ರಾಷ್ಟ್ರಕ್ಕೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಚೀನಾದ ನಾಯಕರು, ‘ಭಾರತದ ಪ್ರಜಾಪ್ರಭುತ್ವ ಯಾವ ರೀತಿ ನಡೆಯುತ್ತಿದೆ?’ ಎಂದು ಕೇಳಿದರಂತೆ. ಅದಕ್ಕೆ ಪ್ರಮೋದ ಮಹಾಜನ ಹೇಳಿದರಂತೆ, ‘ನೋಡಿ, ನಾನು ಈ ನಿಯೋಗದಲ್ಲಿರುವ ಎಲ್ಲರ ಪರಿಚಯ ಮಾಡಿಕೊಡುತ್ತೇನೆ, ಆಗ ನಿಮಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಒಂದು ಬರಬಹುದು. ನಾನು ಪ್ರಮೋದ ಮಹಾಜನ, ಲೋಕಸಭಾ ಸದಸ್ಯ, ನಮ್ಮದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದೇವೆ.’ ಈ ಮಾತನ್ನು ಕೇಳುತ್ತಿದ್ದಂತೆ, ಚೀನಾದ ನಾಯಕರಿಗೆ ಆಶ್ಚರ್ಯವಾಯಿತಂತೆ. ‘ಅತಿದೊಡ್ಡ ಪಕ್ಷವಾಗಿ ಆರಿಸಿ ಬಂದರೂ, ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದೇಕೆ?’ ಎಂದು ಕೇಳಿದರಂತೆ. ಅದಕ್ಕೆ ಮಹಾಜನ ‘ಸ್ವಲ್ಪ ತಾಳಿ, ಮತ್ತೊಬ್ಬರನ್ನು ಪರಿಚಯ ಮಾಡಿಕೊಡುತ್ತೇನೆ.

ಇವರು ಕಾಂಗ್ರೆಸ್‌ನ ಲೋಕಸಭಾ ಸದಸ್ಯರು. ಇವರದು ಸಂಸತ್ತಿನಲ್ಲಿ ಎರಡನೇ ಅತಿದೊಡ್ಡ ಪಕ್ಷ. ಇವರು ಸರಕಾರಕ್ಕೆ ಬೆಂಬಲ ನೀಡಿದ್ದರೂ, ಹೊರಗೆ ಇದ್ದಾರೆ.’ ಚೀನಾದ ನಾಯಕರು ತಬ್ಬಿಬ್ಬು. ಅವರಿಗೆ ಅರ್ಥವೇ ಆಗಲಿಲ್ಲ. ನಿಯೋಗದಲ್ಲಿ ಕಮ್ಯುನಿಸ್‌ಟ್ ಪಕ್ಷದ ಸದಸ್ಯರೂ ಇದ್ದರು. ಅವರನ್ನು ತೋರಿಸುತ್ತಾ ಮಹಾಜನ ಹೇಳಿದರಂತೆ- ‘ಇವರು ಮೂರನೇ ಅತಿದೊಡ್ಡ ಪಕ್ಷದ ಸದಸ್ಯರು. ಸರಕಾರ ರಚಿಸಿದ ಮೈತ್ರಿಕೂಟದ ಸದಸ್ಯ ಪಕ್ಷದವರು. ಆದರೆ ಸರಕಾರದ ಹೊರಗಿದ್ದಾರೆ.’ ಚೀನಾ ನಾಯಕರಿಗೆ ಏನೂ ಅರ್ಥವಾಗದೇ ತಲೆ ಕೆರೆದುಕೊಳ್ಳುತ್ತಿದ್ದರು. ಆ ಸಂಸದೀಯ ನಿಯೋಗದ ಮುಖ್ಯಸ್ಥರನ್ನು ಪರಿಚಯಿಸುತ್ತಾ ಮಹಾಜನ್ ಹೇಳಿದರಂತೆ- ‘ ಇವರು ರಮಾಕಾಂತ್ ಕಲಪ್. ಇವರ ಪಕ್ಷದಿಂದ ಬಂದಿರುವ ಏಕೈಕ ಸದಸ್ಯರು. ಕೇವಲ ಒಂದು ಸ್ಥಾನ ಗಳಿಸಿದ ಪಕ್ಷ ಸರಕಾರಕ್ಕೆ ಬೆಂಬಲ ನೀಡಿ ಮಂತ್ರಿಯಾಗಿದ್ದಾರೆ.’ ಮಹಾಜನ ಹೇಳಿದ್ದನ್ನು ಕೇಳಿ ಜತೆಯಲ್ಲಿದ್ದ ಸಂಸದರು ಬಿದ್ದು ಬಿದ್ದು ನಗುತ್ತಿದ್ದರೆ, ಚೀನಾದ ನಾಯಕರು ಏನೂ ಅರ್ಥವಾಗದೇ ಪರ ಪರ  ಕೆರೆದುಕೊಳ್ಳುತ್ತಿದ್ದರು.

ನಾನು ಈ ಪ್ರಸಂಗವನ್ನು ಕರ್ನಾಟಕ ವಿಧಾನಸಭಾ ಚುನಾವಣೆ ವರದಿಗಾರಿಕೆಗೆ ಬಂದ ವಿದೇಶಿ ಪತ್ರಕರ್ತರೊಬ್ಬರಿಗೆ ಹೇಳಿದೆ. ಅವರು ಮತ್ತೊಮ್ಮೆ ಹೇಳುವಂತೆ ಹೇಳಿದರು. ಕಾರಣ ಅವರಿಗೆ ತಲೆಬುಡ ಅರ್ಥವಾಗಿರಲಿಲ್ಲ. ನಾನು ಎರಡನೆ ಹೇಳಿದೆ. ಆದರೂ ಅವರಿಗೆ ಅರ್ಥವಾಗಲಿಲ್ಲ. ಅತಿಹೆಚ್ಚು ಸ್ಥಾನ  ಪಡೆದ ಪಕ್ಷ ಸರಕಾರ ರಚಿಸದೇ, ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿದ್ದೇಕೆ ಎಂದು ಪದೇಪದೆ ಪ್ರಶ್ನಿಸಲಾರಂಭಿಸಿದರು. 545 ಸದಸ್ಯ ಬಲದ ಲೋಕಸಭೆಯಲ್ಲಿ ಕೇವಲ 16 ಸದಸ್ಯರನ್ನು ಹೊಂದಿದ ನಾಯಕರೊಬ್ಬರು ಪ್ರಧಾನ ಮಂತ್ರಿಯಾಗಿದ್ದು ಹೇಗೆ ಎಂಬ ಪ್ರಶ್ನೆಗೆ, ಉತ್ತರ ಹೇಳಿ, ಅವರಿಗೆ ಅರ್ಥ ಮಾಡಿಸುವ ಹೊತ್ತಿಗೆ ನನಗೆ ಸಾಕೋಸಾಕಾಗಿ ಹೋಗಿತ್ತು. ಇನ್ನು ಅವರಿಗೆ ಇಡೀ ಪ್ರಸಂಗದಲ್ಲಿರುವ ಹಾಸ್ಯ ಅರ್ಥವಾಗುವುದಾದರೂ ಹೇಗೆ ? ಪ್ರಾಯಶಃ ಈ ಭಾರತೀಯರಲ್ಲದೇ, ಬೇರೆ ಯಾರಿಗೇ ಹೇಳಿದರೂ ಅರ್ಥವಾಗುವುದಿಲ್ಲ.

ಕಾರಣ ಈ ರೀತಿಯ ಅನುಕೂಲಸಿಂಧು ರಾಜಕಾರಣ ಜಾರಿಯಲ್ಲಿರುವುದು ಭಾರತದಲ್ಲೊಂದೇ. ಜಗತ್ತಿನ ಯಾವ ದೇಶದಲ್ಲೂ ಅತಿದೊಡ್ಡ ಪಕ್ಷವಾಗಿ ಆರಿಸಿ ಬಂದರೂ, ಅಧಿಕಾರ ನಡೆಸದೇ, ಸರಕಾರದ ಹೊರಗಿರುವ ಸಂಪ್ರದಾಯವಿಲ್ಲ. ಅಧಿಕಾರವನ್ನು ಹಂಚಿಕೊಳ್ಳಲು, ಸಮ್ಮಿಶ್ರ ಸರಕಾರದಂಥ ಅದ್ಭುತ ಏರ್ಪಾಡು ಅಥವಾ ವ್ಯವಸ್ಥೆ ಮತ್ತೊಂದಿಲ್ಲ. ಅಲ್ಲಿ ಜನಾದೇಶಕ್ಕೆ ಕಿಮ್ಮತ್ತೇ ಇಲ್ಲ. ಕೆಲವು ಅಧಿಕಾರದಾಹಿಗಳು ಸೇರಿಕೊಂಡು, ತಮಗೆ ಬೇಕಾದಂತೆ ಅಧಿಕಾರವನ್ನು ಹಂಚಿಕೊಳ್ಳುವ ವ್ಯವಸ್ಥೆ ಅದು. ಸಮಾನಮನಸ್ಕ ಪಕ್ಷಗಳು ಚುನಾವಣೆಗಿಂತ ಮೈತ್ರಿ ಮಾಡಿಕೊಂಡು, ಸೀಟುಗಳನ್ನು ಹಂಚಿಕೊಂಡು, ಕೆಲವು ಮೂಲಭೂತ ವಿಷಯಗಳ ಬಗ್ಗೆ ಒಮ್ಮತ ಹೊಂದಿ ಚುನಾವಣೆ ಎದುರಿಸಿ, ಆನಂತರ ಸರಕಾರ ರಚಿಸಿದರೆ ತಪ್ಪೇನಿಲ್ಲ.

ಅದು ನಿಜವಾದ ಅರ್ಥದಲ್ಲಿ ಸಮ್ಮಿಶ್ರ ಅಥವಾ ಮೈತ್ರಿ ಸರಕಾರ. ಆದರೆ ಚುನಾವಣೆಗೆ ಮುನ್ನ ಯಾವುದೇ ಮೈತ್ರಿ, ಹೊಂದಾಣಿಕೆ ಮಾಡಿಕೊಳ್ಳದೇ, ಚುನಾವಣೆಯಲ್ಲಿ ಪರಮ ವೈರಿಗಳಂತೆ ಕಚ್ಚಾಡಿ, ಬಹುಮತ ಪಡೆಯಲು ಸಾಧ್ಯವಾಗದೇ ಎರಡುಮೂರು ಪಕ್ಷಗಳು ಏಕಾಏಕಿ ಒಂದಾಗಿ ಸರಕಾರ ರಚನೆಗೆ ಮುಂದಾದರೆ, ಅದು ಯಾರೇ ಮಾಡಲಿ, ಯಾವ ಪಕ್ಷದವರೇ ಅದು ಅನೈತಿಕ, ಅಪವಿತ್ರ ಮೈತ್ರಿ ಸರಕಾರ. ಚುನಾವಣಾ ಪೂರ್ವ ಮೈತ್ರಿಯನ್ನು ಒಪ್ಪಬಹುದು, ಚುನಾವಣೋತ್ತರ ಮೈತ್ರಿ ಅನೈತಿಕ. ಮೊದಲನೆಯದು ಒಂಥರಾ ಎಂಗೇಜ್‌ಮೆಂಟ್(ನಿಶ್ಚಿತಾರ್ಥ) ಇದ್ದಂತೆ. ಎರಡನೆಯದು ಪಕ್ಕಾ ಹಾದರ! ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಭ್ಯತೆ, ಶಿಷ್ಟಾಚಾರದ ಎಲ್ಲೆ ಮೀರಿ ಪರಸ್ಪರರನ್ನು ದೂಷಿಸಿಕೊಂಡರು. ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರನ್ನು ಹೀನಾಯವಾಗಿ ಟೀಕಿಸಿದರು, ಜರೆದರು.

ಜೆಡಿಎಸ್ ನಾಯಕರೇನು ಆಗ ಬಾಯಲ್ಲಿ ಕವಳ ಹಾಕಿಕೊಂಡಿರಲಿಲ್ಲ. ಅವರೂ ಉಗಿದರು. ಎಂಥ ಪ್ರಸಂಗ ಬಂದರೂ ಜೆಡಿಎಸ್‌ನವರ ಜತೆ ಕೈ ಜೋಡಿಸುವುದಿಲ್ಲ ಎಂದಿದ್ದರು ಕಾಂಗ್ರೆಸ್ ನಾಯಕರು. ಅಂಥ ಪ್ರಸಂಗ ಬಂದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೇ ಹೊರತು ಕಾಂಗ್ರೆಸ್ ಬೆಂಬಲ ಯಾಚಿಸುವುದಿಲ್ಲ ಎಂದಿದ್ದರು ಜೆಡಿಎಸ್ ನಾಯಕರು. ಅವರು ನೀನು-ತಾನು ಅಂದರೆ, ಇವರು ಹಮಾರಿ-ತುಮಾರಿ ಅಂದರು. ಯಾವ ಕಾರಣಕ್ಕೂ ಈ ಜನ್ಮದಲ್ಲಿ ಕಾಂಗ್ರೆಸ್ -ಜೆಡಿಎಸ್ ಒಂದಾಗುವುದಿಲ್ಲ ಎಂದು ಎರಡೂ ಪಕ್ಷಗಳ ನಾಯಕರು ಶಪಥ ಮಾಡಿದರು. ಎರಡೂ ಪಕ್ಷಗಳ ನಾಯಕರು ಏಕವಚನದಲ್ಲಿ ಪರಸ್ಪರರನ್ನು ದೂಷಿಸಿಕೊಂಡರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ವೈಯಕ್ತಿಕ ದ್ವೇಷ, ಗೌರಿಶಂಕರದೆತ್ತರಕ್ಕೆ ಏರಿತ್ತು. ರಾಜ್ಯದ ಮತದಾರರು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಈ ಮೂರು ಪಕ್ಷಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಮತ ನೀಡಿದರು. ಈ ಮೂರು ಪಕ್ಷಗಳಲ್ಲಿ ಯಾವುದೇ ವಿಚಾರ ಸಾಮ್ಯವಾಗಲಿ, ಸಮಾನ ಭೂಮಿಕೆಯಾಗಲಿ ಇರಲಿಲ್ಲ. ಆದರೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಪೂರ್ಣ ತಿರಸ್ಕೃತಗೊಂಡಿದ್ದು ಸಾಬೀತಾಯಿತು. ಆದರೆ ಬಿಜೆಪಿಗೆ ಸರಳ ಬಹುಮತ ಪ್ರಾಪ್ತಿ ಅಸಾಧ್ಯವೆಂಬುದು ಮನವರಿಕೆಯಾಗುತ್ತಿದ್ದಂತೆ, ಇನ್ನು ಹಲವು ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಳ್ಳುವುದು ಬಾಕಿ ಇರುವಾಗಲೇ, ಕಾಂಗ್ರೆಸ್ ಜೆಡಿಎಸ್‌ಗೆ ಬೆಂಬಲ ಸೂಚಿಸಿತು.

ಸರಕಾರದ ನೇತೃತ್ವ ವಹಿಸಿಕೊಳ್ಳಿ ಎಂದು ಹೇಳಿ ಮುಖ್ಯಮಂತ್ರಿ ಪದವಿಯನ್ನು ಚಿನ್ನದ ಹರಿವಾಣದಲ್ಲಿಟ್ಟು ಜೆಡಿಎಸ್ ನಾಯಕರ ಮನೆಗೆ ಹೋಗಿ, ಅವರ ಕಾಲ ಬುಡದಲ್ಲಿಟ್ಟು ‘ಒಪ್ಪಿಕೊಳ್ಳಿ ಪ್ರಭುವೇ!’ ಎಂದಿತು. ಸ್ವಂತ ಬಲದಿಂದ ಚುನಾವಣೆಯಲ್ಲಿ ಬಹುಮತ ಪಡೆಯುತ್ತೇನೆ ಎಂದು ಹೇಳುತ್ತಿದ್ದ ಜೆಡಿಎಸ್ ನಾಯಕರಿಗೆ ಫಲಿತಾಂಶ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಹಿಂದಿನ ಸಲದ ಚುನಾವಣೆಗಿಂತ ಎರಡು ಕಡಿಮೆ ಸ್ಥಾನಗಳು ಬಂದು ಹೈರಾಣಾಗಿ ಹೋಗಿತ್ತು. ಕಾಂಗ್ರೆಸ್ ನಾಯಕರು ಏಕಾಏಕಿ ಮನೆ ಬಾಗಿಲಿಗೆ ಕಾಲಬುಡದಲ್ಲಿ ಹರಿವಾಣವಿಟ್ಟಾಗ, ಜೆಡಿಎಸ್ ನಾಯಕರು ತಬ್ಬಿಬ್ಬು. ಇಂಥ ಪ್ರಸಂಗ ಕನಸಲ್ಲೂ ಬರಲಿಕ್ಕಿಲ್ಲ ಎಂದು ಭಾವಿಸಿದ್ದವರಿಗೆ ಅದೃಷ್ಟ ಒದ್ದು ಬಂದರೆ ಹೇಗಾಗಬೇಡ ? ಹಿಂದೆ ಆಡಿದ್ದೆಲ್ಲ ‘ಥಟ್’ ಅಂತ ಮರೆತುಹೋಯಿತು. ಏಕಾಏಕಿ ಪರಮ ವೈರಿಗಳು ಆಲಂಗಿಸಿಕೊಂಡುಬಿಟ್ಟರು!

ಅದೇನೇ ಸಮರ್ಥನೆ ಕೊಟ್ಟರೂ, ಇದು ರಾಜಕೀಯ ಹಾದರ ಎಂಬುದನ್ನು ಅಲ್ಲಗೆಳೆಯಲಾಗದು. ಕನಿಷ್ಠ ತಾವು ‘ಹಾದರ’ವನ್ನೇ ಮಾಡುತ್ತಿರೋದು ಎಂಬುದನ್ನಾದರೂ ಎದೆತಟ್ಟಿ ಹೇಳುವ ಪ್ರಾಮಾಣಿಕತೆ ಮೆರೆದರೆ ತಪ್ಪಿಲ್ಲ. ಅದು ಬಿಟ್ಟು ಕರ್ನಾಟಕ ಅಭಿವೃದ್ಧಿ ಮುಖ್ಯ ಎಂದು ನಾಯಕರು ಹೇಳುವುದು ಶುದ್ಧ ಕಪಟತನವೇ. ಒಂದು ವೇಳೆ ರಾಜ್ಯದ ಅಭಿವೃದ್ಧಿಯೇ ಮುಖ್ಯ ಎಂದಾದರೆ, ಜೆಡಿಎಸ್ ಕಾಂಗ್ರೆಸ್‌ನವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡಲು ತಯಾರಿದೆಯಾ? ಮುಖ್ಯಮಂತ್ರಿ ಪದವಿ ನಿಮಗೇ ಕೊಡ್ತೇವೆ ಎಂಬ ಪ್ರಸ್ತಾವನೆ ಇಲ್ಲದೇ, ನಮಗೆ ಸಪೋರ್ಟ್ ಮಾಡಿ ಎಂದು ಕಾಂಗ್ರೆಸ್‌ನವರು ಹೇಳಿದ್ದಿದ್ದರೆ ಜೆಡಿಎಸ್‌ನವರು ಸ್ವೀಕರಿಸುತ್ತಿದ್ದರಾ? ಬಿಲ್‌ಕುಲ್ ಇಲ್ಲವೇ ಇಲ್ಲ. ಆಗ ಜೆಡಿಎಸ್ ನಾಯಕರು ಬಿಜೆಪಿ ನಾಯಕರುಗಳ ಮನೆ ಬಡಿಯುತ್ತಿದ್ದರು ಅಥವಾ ಬಿಜೆಪಿಯವರು ಜೆಡಿಎಸ್‌ನವರನ್ನು ಹುಡುಕಿಕೊಂಡು ಹೋಗುತ್ತಿದ್ದರು. ಅದೂ ಅಪವಿತ್ರ ಮೈತ್ರಿಯೇ ಕಾರಣ ಚುನಾವಣೆಗಿಂತ ಮುನ್ನ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಮೈತ್ರಿಯೇನೂ ಏರ್ಪಟ್ಟಿರಲಿಲ್ಲ. ಇವೆಲ್ಲ ಗೊತ್ತಿದ್ದರೂ, ಕಾಂಗ್ರೆಸ್, ಜೆಡಿಎಸ್ ಒಂದಾಗಿದ್ದು ತಿಳಿದಿದ್ದರೂ, ಬಿಜೆಪಿ ನಾಯಕರು ಜೆಡಿಎಸ್ ನಾಯಕರನ್ನು ಭೇಟಿ ಮಾಡಿದ್ದು ಖಂಡಿತ ಸುಬಗತನ ಅಲ್ಲ!

ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಖಂಡಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಅತಿ ದೊಡ್ಡ ಪಕ್ಷವಾಗಿ ಗೆದ್ದರೂ, ಎರಡು ಹಾಗೂ ಮೂರನೇ ಪಕ್ಷಗಳ ಮೈತ್ರಿಯನ್ನು ವಿರೋಧಿಸಲು ಬಿಜೆಪಿ ನೈತಿಕ ಬಲ ಕಳೆದುಕೊಂಡಿದೆ. ನೀವು ಗೋವಾದಲ್ಲಿ ಮಾಡಿದ್ದೀರೋ, ನಾವು ಇಲ್ಲಿ ಮಾಡುತ್ತಿದ್ದೇವೆ, ತಪ್ಪೇನು ಎಂದು ಕೇಳಿದರೆ, ಬಿಜೆಪಿ ನಾಯಕರಲ್ಲಿ ಯಾವ ಉತ್ತರವಿದೆ? ಗೋವಾದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗಳಿಸಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 13 ಹಾಗೂ ಮಹಾರಾಷ್ಟ್ರ ಗೋಮಾಂತಕ ಪಾರ್ಟಿ 3 ಸ್ಥಾನಗಳನ್ನು ಪಡೆದಿತ್ತು. ಮೂವರು ಪಕ್ಷೇತರರು ಆರಿಸಿ ಬಂದಿದ್ದರು. ಬಿಜೆಪಿ ಏಕಾಏಕಿ ಮೂವರು ಪಕ್ಷೇತರರಿಗೆ ಆಮಿಷ ಒಡ್ಡಿ ಅವರನ್ನು ಸೆಳೆದುಕೊಂಡು, ಗೋಮಾಂತಕ ಪಾರ್ಟಿಯೊಂದಿಗೆ ಸರಕಾರ ರಚಿಸಿ ಬಿಟ್ಟಿತು. ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದೂ ಚಳ್ಳೇಹಣ್ಣು ತಿನ್ನಬೇಕಾಯಿತು.

ಗೋವಾದಲ್ಲಿ ತಿಂದ ಚಳ್ಳೇಹಣ್ಣಿನ ರುಚಿ ಇನ್ನೂ ನಾಲಗೆ ಮೇಲೆ ಇರುವಾಗಲೇ ಪಾಠ ಕಲಿತ ಕಾಂಗ್ರೆಸ್, ಫಲಿತಾಂಶದ ಟ್ರೆಂಡ್ ಅರಿತು, ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಬಹುಮತಕ್ಕೆ ಪರದಾಡುತ್ತಿರುವುದನ್ನು ಮನಗಂಡು, ಚಂಗನೆ ಜೆಡಿಎಸ್‌ನ್ನು ಹಾರಿಸಿಕೊಂಡು, ರಾಜ್ಯಪಾಲರ ಮುಂದೆ ಹೋಗಿ, ನಮ್ಮಿಬ್ಬರಿಗೂ ಪ್ರೇಮಾಂಕುರವಾಗಿದೆ, ಮದುವೆ ಮಾಡಿಸಿ ಎಂದು ಹೇಳಿತು. ಈ ‘ಅಪವಿತ್ರ ಮೈತ್ರಿ’ಯನ್ನು ವಿರೋಧಿಸಲು ಬಿಜೆಪಿಗೆ ಯಾವ ನೈತಿಕತೆಯಿದೆ? ಗೋವಾದಲ್ಲಿ ಅಂದು ಆಡಿದ ‘ಆಟ’ವನ್ನು, ಕರ್ನಾಟಕದಲ್ಲಿ ಇಂದು ಕಾಂಗ್ರೆಸ್‌ನವರು ಅಂದು ಬಿಜೆಪಿ ಮಾಡಿದ್ದು ಸರಿಯಾದರೆ, ಇಂದು  ಕಾಂಗ್ರೆಸ್ ಮಾಡಿದ್ದು ಹೇಗೆ ತಪ್ಪಾಗುತ್ತದೆ? ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಸಹ ಬಿಜೆಪಿ ಮಾಡಿದ್ದು ಇದೇ. ಬಿಹಾರದಲ್ಲಿ ಲಾಲೂ ಯಾದವ್ ಅವರ ಆರ್‌ಜೆಡಿ(80) ಅತಿ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ(53) ಜೆಡಿಯು(71) ಜತೆ ಸೇರಿ ಸರಕಾರ ರಚಿಸಿದ್ದನ್ನು ಸಮರ್ಥಿಸುವುದು ಹೇಗೆ? ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಪವಿತ್ರವಾಗಿದ್ದರೂ, ಅದನ್ನು ಬಿಜೆಪಿಗೆ ವಿರೋಧಿಸಲು ಸಾಧ್ಯವಾಗದಿರುವುದು ಈ ಕಾರಣಕ್ಕೆ. ಈಗ ಸಂಖ್ಯಾಬಲವಿಲ್ಲದಿದ್ದರೂ, ಬಿಜೆಪಿ ಸರಕಾರ ರಚನೆಗೆ ಮುಂದಾಗಿದೆ.

ಅಂದರೆ ಈಗ ಬಹುಮತವನ್ನು Manufacture ಮಾಡಬೇಕಿದೆ. ಇದಕ್ಕೂ ಅಡ್ಡದಾರಿ ಹಿಡಿಯಲೇಬೇಕು. ಒಂದಷ್ಟು ಪಾಪಕಾರ್ಯಗಳನ್ನು ಎಸಗಲೇಬೇಕು. ಅದನ್ನೇ ಮುಂದೆ ಬೇರೆ ಪಕ್ಷಗಳೂ ಮಾಡಿದಾಗ, ಸುಮ್ಮನಿರಬೇಕಾಗುತ್ತದೆ. ಯಾವತ್ತೂ ರಾಜಕಾರಣದಲ್ಲಿ ಒಂದು ತಪ್ಪನ್ನು ಮಾಡಿ ಸುಮ್ಮನಿರಲು ಸಾಧ್ಯವಿಲ್ಲ. ಮಾಡಿದ ತಪ್ಪನ್ನು ಮುಚ್ಚಲು ಮತ್ತೊಂದು, ಇನ್ನೊಂದು, ಮಗದೊಂದು, ಹತ್ತಾರು ತಪ್ಪುಗಳನ್ನು ಮಾಡುತ್ತಲೇ ಹೋಗಬೇಕಾಗುತ್ತದೆ. 2008ರಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದಾಗ (ಅತಿದೊಡ್ಡ ಪಕ್ಷವಾದರೂ) ಅದನ್ನು Manufacture ಮಾಡಿಕೊಳ್ಳಲು ಹತ್ತಾರು ತಪ್ಪುಗಳನ್ನು ಮಾಡಬೇಕಾಗಿ ಬಂದಿತು. ಆ ತಪ್ಪುಗಳೇ ಆ ಐದು ವರ್ಷಗಳ ಕಾಲ ಅಧಿಕಾರದಿಂದ ದೂರವಿಟ್ಟಿತು. ಹತ್ತು ವರ್ಷಗಳ ನಂತರ, ಇತಿಹಾಸ ಪುನರಾವರ್ತನೆಯಾಗಿದೆ. ಆಗ ಪರಿಸ್ಥಿತಿ ಹೇಗಿತ್ತೋ, ಈಗಲೂ ಹಾಗೆಯೇ ಇದೆ.

ಹಿಂದೆ ತಾನು ಮಾಡಿದ ಪ್ರಮಾದಗಳಿಂದ ಬಿಜೆಪಿ ಪಾಠ ಕಲಿತಂತಿಲ್ಲ. 2008 ರಲ್ಲಿ ಬಹುಮತ ‘ತಯಾರು’ ಮಾಡಲು ಹೋಗಿ ತನ್ನ ಮೂರು ಸರಕಾರಗಳನ್ನು ಬಲಿಕೊಡಬೇಕಾಗಿ ಬಂತು. ಈಗ ಬಿಜೆಪಿ ಆರಂಭದಿಂದಲೇ ತಪ್ಪು ಮಾಡಲು ಮಾನಸಿಕವಾಗಿ ಸಿದ್ಧವಾದಂತಿದೆ. ಇದರ ಪರಿಣಾಮ ಮಾತ್ರ ಭಯಂಕರವಾಗಿರುವುದು ಗ್ಯಾರಂಟಿ. ದುರ್ದೈವವೆಂದರೆ, ರಾಜಕಾರಣದಲ್ಲಿ ಏನೇ ಅದು ಸರಿ, ಅಧಿಕಾರ ಹಿಡಿಯಲೇಬೇಕು ಎಂಬುದೇ ಮೂಲಮಂತ್ರವಾಗಿರುವಾಗ, ಎಲ್ಲವೂ ಮಾಫು! ಅಧಿಕಾರದ ಮುಂದೆ ಎಲ್ಲವೂ ಗೌಣ. ಅದೇನೇ ಇರಲಿ, ಶಾಸಕರು ಗೆದ್ದಿರಬಹುದು, ಮತದಾರರು ಮಾತ್ರ ಸೋತಿದ್ದಾರೆ!

Leave a Reply

Your email address will not be published. Required fields are marked *

3 × one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top