ಬಲ್ಲವರೇ ಬಲ್ಲರು ಚುನಾವಣೆಯ ಮರ್ಮ!

Posted In : ಅಂಕಣಗಳು, ನೂರೆಂಟು ವಿಶ್ವ

ಇತ್ತೀಚೆಗೆ ಒಂದು ಪುಸ್ತಕವನ್ನು ಆಸ್ಥೆಯಿಂದ ಓದುತ್ತಿದ್ದೆ. ಅದರ ಹೆಸರು “How to win an Election: An Ancient Guide for Modern Politicians’  ಇದನ್ನು ಬರೆದವರು ಕ್ವಿಂಟಸ್ ಟಲ್ಲಿಯಸ್ ಬಸೆರೋ. ಕ್ರಿಸ್ತಪೂರ್ವ 64ರಲ್ಲಿ ಬರೆದ ಕೃತಿ. ಇದನ್ನು ಪ್ರಕಟಿಸಿದ ಪ್ರಕಾಶಕರ ಪ್ರಕಾರ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಚರ್ಚಿತವಾದ ವಿಷಯ ಈ ಕೃತಿಯಲ್ಲಿ ಅಡಕವಾಗಿದೆಯಂತೆ. ನನ್ನ ಕುತೂಹಲಕ್ಕೆ ಇದೇ ಕಾರಣವಾಯಿತು. ಚುನಾವಣಾ ಹೊತ್ತಿನಲ್ಲಿ, ಎರಡು ಸಾವಿರ ವರ್ಷಗಳ ಹಿಂದೆ, ಯಾವ ರೀತಿ ಚುನಾವಣೆ ಸೆಣಸುತ್ತಿದ್ದರು, ಪ್ರಚಾರ ಯಾವ ರೀತಿ ಇರುತ್ತಿತ್ತು. ತಂತ್ರ ಹೇಗೆ ರೂಪಿಸುತ್ತಿದ್ದರು. ಮತದಾರರನ್ನು ಹೇಗೆ ಆಕರ್ಷಿಸುತ್ತಿದ್ದರು ಎಂಬುದನ್ನು ಓದುವುದು, ತಿಳಿದುಕೊಳ್ಳುವುದು ಪ್ರಸ್ತುತವೆನಿಸಿತು.

ಹಾಗೆ ನೋಡಿದರೆ, ಇಡೀ ಕರ್ನಾಟಕವೇ ಚುನಾವಣೆಯಲ್ಲಿ ಮುಳುಗಿಹೋಗಿದೆ. ಚುನಾವಣೆಗೆ ನಿಂತ ಅಭ್ಯರ್ಥಿಗಳಿಗೆ, ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣೆ ಗೆಲ್ಲುವುದು ಹೇಗೆ ಎಂಬ ಚಿಂತೆ. ಎಲ್ಲರೂ ಈ ಲೆಕ್ಕಾಚಾರದಲ್ಲೇ ಮುಳುಗಿ ಹೋಗಿದ್ದಾರೆ. ಹತ್ತು ಸಲ ಸೆಣಸಿದ, ಅಭ್ಯರ್ಥಿಗೆ ಹನ್ನೊಂದನೆ ಸಲ ಎಲ್ಲವೂ ಹೊಸತು. ಕಳೆದ ಹತ್ತು ಸಲದ ತಂತ್ರಗಳೆಲ್ಲ ಹಳತು. ಕಾರಣ, ಪ್ರತಿಸಲ ಅಭ್ಯರ್ಥಿಗಳು ಬೇರೆ, ಮತದಾರರ ಮನಸ್ಥಿತಿ ಹಾಗೂ ಕ್ಷೇತ್ರದ ಪರಿಸ್ಥಿತಿ ಬೇರೆ. ಚುನಾವಣಾ ಕಣದಲ್ಲಿನ ವಿಷಯಗಳೂ ಬೇರೆ. ಹೀಗಾಗಿ ಚುನಾವಣೆ ಗೆಲ್ಲುವುದು ಎಂಥವರಿಗೂ ಹರಸಾಹಸವೇ. ಸಿದ್ಧಸೂತ್ರವೆಂಬುದು ಇಲ್ಲವೇ ಇಲ್ಲ. ಇದ್ದರೂ ಅದು ಉಪಯೋಗಕ್ಕೆ ಬರುವುದಿಲ್ಲ. ಚುನಾವಣೆ ಗೆಲ್ಲುವುದು ಹೇಗೆ ಎಂಬುದು ಕರಗತವಾಗಿದೆ ಎಂದು ಎದೆ ತಟ್ಟಿ ಹೇಳುವ ರಾಜಕಾರಣಿ ಇಲ್ಲವೇ ಇಲ್ಲ.

ಜೀವನದಲ್ಲಿ ಕಾಣದ, ಸೆಣಸಿದ ಎಲ್ಲಾ ಚುನಾವಣೆಗಳಲ್ಲಿ ಗೆದ್ದು ‘ಸೋಲಿಲ್ಲದ ಸರದಾರ’ ಎಂದು ಹೆಸರು ಗಳಿಸಿದ್ದ ಸಾರೇಕೊಪ್ಪ ಬಂಗಾರಪ್ಪ, ಅವರು ಲೈಟ್‌ವ್ಹೇಟ್ ಎಂದು ಪರಿಗಣಿಸಿದ ಆಯನೂರು ಮಂಜುನಾಥ ವಿರುದ್ಧ ಸೋತುಹೋದರು. ಮುಖ್ಯಮಂತ್ರಿ ಜೆ.ಎಚ್.ಪಟೇಲರು ಚನ್ನಗಿರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ವಡ್ನಾಕಿ ರಾಜಣ್ಣ ವಿರುದ್ಧ ಹೀನಾಯವಾಗಿ ಸೋತು ಹೋದರು. ಒಮ್ಮೆ ದೇವೇಗೌಡರು ಸೆಣಸಿದ ಎರಡು ಕ್ಷೇತ್ರಗಳಲ್ಲಿ ಪರಾಭವಗೊಂಡರು. ‘ಮಾಜಿ ಪ್ರಧಾನಿ’ ದೇವೇಗೌಡರನ್ನು ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಿಂದ ಸೆಣಸಿದ ಟಿವಿ ಆ್ಯಂಕರ್ ತೇಜಸ್ವಿನಿ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದರು. ತೇಜಸ್ವಿನಿ ಅವರಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು, ಬಾಗಲಕೋಟೆಯಲ್ಲಿ, ಸಿದ್ದು ನ್ಯಾಮಗೌಡ ಎಂಬ ಅಷ್ಟೇನೂ ಪರಿಚಿತರಲ್ಲದ ಅಭ್ಯರ್ಥಿ ವಿರುದ್ಧ ಸೋತಿದ್ದರು. ಕಳೆದ ಚುನಾವಣೆಯಲ್ಲಿ, ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲೊಬ್ಬರು ಎಂದು ಬಿಂಬಿತರಾದ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಅವರು, ಅಷ್ಟೇನೂ ಪರಿಚಿತರಲ್ಲದ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು.

ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ಅವರನ್ನು ಜೇವರ್ಗಿ ಕ್ಷೇತ್ರದಲ್ಲಿ ಇರಲಿಲ್ಲ. 1960ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮುನಿಸಿಪಲ್ ಚುನಾವಣೆಯಲ್ಲಿ ಗೆದ್ದ ಸಿಂಗ್, ಆನಂತರ ಕಾಂಗ್ರೆಸ್ ಸೇರಿದ್ದರು. ಮೊದಲ ಬಾರಿಗೆ ಅವರು ಜೇವರ್ಗಿಯಲ್ಲಿ ಎರಡು ಸಲ ಸಂಸದರಾದ ಮಹದೇವಪ್ಪ ರಾಂಪುರೆ ವಿರುದ್ಧ 1972ರಲ್ಲಿ ಸೆಣಸಿ ಗೆದ್ದರು. ಅಂದಿನಿಂದ ಆರಂಭವಾದ ಅವರ ಗೆಲುವಿನ ಯಾತ್ರೆ ನಿರಂತರವಾಗಿ 2008ರ ವರೆಗೆ ಮುಂದುವರಿಯಿತು. ಒಂಬತ್ತು ಬಾರಿ ಅವರು ಈ ಕ್ಷೇತ್ರದಿಂದ ಗೆದ್ದು ದಾಖಲೆ ಬರೆದಿದ್ದರು. ಆದರೆ 2008ರಲ್ಲಿ ಸಿಂಗ್ ವಿರುದ್ಧ ಬಿಜೆಪಿಯ ದೊಡ್ಡಪ್ಪಗೌಡ. ಎಸ್. ಪಾಟೀಲ ಎಂಬ ಸಾಮಾನ್ಯ ರಾಜಕೀಯ ಕಾರ್ಯಕರ್ತ ಹಾಗೂ ಕೃಷಿಕ ಸೆಣಸಿ, ಕೇವಲ 58 ಮತಗಳ ಅಂತರದಿಂದ ಗೆದ್ದರು. ಚುನಾವಣೆ ಗೆಲ್ಲುವುದು ಹೇಗೆ ಎಂಬುದನ್ನು ಧರಂಸಿಂಗ್ ಅವರಿಂದ ಕಲಿಯಿರಿ ಎಂದು ದೇವೇಗೌಡರೇ ವಿಧಾನ ಸಭಾ ಕಲಾಪದಲ್ಲಿ ಹೇಳಿದ್ದರು. ಕಾರಣ, ಜೇವರ್ಗಿ ಕ್ಷೇತ್ರದಲ್ಲಿ ಧರಂಸಿಂಗ್ ಅವರ ಜಾತಿಯ ಒಂದು ಸಾವಿರ ಮತಗಳೂ ಇರಲಿಲ್ಲ. ಆದರೂ ಅವರು ಎಲ್ಲಾ ಚುನಾವಣೆಗಳಲ್ಲೂ ಆರಿಸಿಬರುತ್ತಿದ್ದರು. ಅಂಥ ಧರಂಸಿಂಗ್ ಒಬ್ಬ ಸಾಮಾನ್ಯ ಅಪರಿಚಿತ ಅಭ್ಯರ್ಥಿ ವಿರುದ್ಧ ಅಲ್ಪ ಮತಗಳ ಸೋತು ಹೋದರು!

ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಇಲ್ಲಿತನಕ ಸೋಲನ್ನೇ ಕಂಡಿಲ್ಲ. 1972ರಿಂದ 2009ರವರೆಗೆ ನಡೆದ ಎಲ್ಲ ಹತ್ತು ವಿಧಾನಸಭಾ ಚುನಾವಣೆಗಳಲ್ಲೂ ಅವರು ಆರಿಸಿಬಂದಿದ್ದಾರೆ. ನಿಜವಾದ ಅರ್ಥದಲ್ಲಿ ಅವರು ಸೋಲನರಿಯದ ಸರದಾರ. ಡಿಎಂಕೆಯ ಕರುಣಾನಿಧಿ ಅವರಿಗೂ ಸೋಲು ಅಂದರೆ ಏನೆಂಬುದೇ ಗೊತ್ತಿಲ್ಲ. ತಮಿಳುನಾಡಿನಲ್ಲಿ 1957ರಿಂದ ಇಲ್ಲಿಯತನಕ ನಡೆದ ಎಲ್ಲಾ 13 ಚುನಾವಣೆಗಳಲ್ಲೂ ಕರುಣಾನಿಧಿ ಸ್ಪರ್ಧಿಸಿದ್ದಾರೆ ಹಾಗೂ ಗೆದ್ದಿದ್ದಾರೆ. ಕಳೆದ 61 ವರ್ಷಗಳಿಂದ ಅವರು ಶಾಸಕರು! ಈ ವಿಷಯದಲ್ಲಿ ಕರುಣಾನಿಧಿಯವರನ್ನು ಸರಿಗಟ್ಟುವವರೆಂದರೆ ಕಾಂಗ್ರೆಸ್‌ನ, 84 ವರ್ಷ ವಯಸ್ಸಿನ ಕೆ.ಎಂ.ಮಣಿ. ಅವರೂ ಸಹ ಹದಿಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಎಲ್ಲಿಯೇ ಸೆಣಸಲಿ, ಗೆಲ್ಲೋದು ಗ್ಯಾರಂಟಿ. ಇಂದಿರಾ ಗಾಂಧಿ, ವಾಜಪೇಯಿ, ದೇವೇಗೌಡ, ಮನಮೋಹನ ಸಿಂಗ್ ಇವರೆಲ್ಲ ಪ್ರಧಾನಿಗಳಾಗಿದ್ದರೂ, ಚುನಾವಣಾ ಸೋಲಿನ ಕಹಿ(ರುಚಿ) ಅನುಭವಿಸಿದವರೇ. ನೆಹರು ಹಾಗೂ ಇಂದಿರಾಗಾಂಧಿ ತರುವಾಯ ಅತಿಹೆಚ್ಚು ಅವಧಿಗೆ ಪ್ರಧಾನಿಯಾಗಿದ್ದ(ಹತ್ತು ವರ್ಷ) ಡಾ.ಮನಮೋಹನ ಸಿಂಗ್ ಅವರು ಒಂದು ಚುನಾವಣೆಯಲ್ಲೂ ಗೆದ್ದವರಲ್ಲ!

ಅನೇಕರಿಗೆ ಗೊತ್ತಿರಲಿಕ್ಕಿಲ್ಲ. 1957ರಲ್ಲಿ ಅಂದಿನ ಜನಸಂಘ ನಾಯಕರಾಗಿದ್ದ ಅಟಲ್ ವಾಜಪೇಯಿ ಅವರು ಲಖನೌ, ಮಥುರಾ ಹಾಗೂ ಬಲರಾಂಪುರದ ಲೋಕಾಸಭಾ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಬಲರಾಂಪುರದಿಂದ ಮಾತ್ರ ಅವರು ಗೆದ್ದರು. ಲಖನೌ ಹಾಗೂ ಮಥುರಾದಲ್ಲಿ ಅವರ ಠೇವಣಿ ನಷ್ಟವಾಯಿತು. ಆನಂತರ ವಾಜಪೇಯಿ ಚುನಾವಣೆಯಲ್ಲಿ ಸೋತಿದ್ದು 1984ರಲ್ಲಿ ಮಾತ್ರ. ಇಂದಿರಾ ಹತ್ಯೆ ಅನುಕಂಪದ ಅಲೆಯಲ್ಲಿ ಗ್ವಾಲಿಯರ್‌ನಲ್ಲಿ ಸ್ಪರ್ಧಿಸಿ ಸೋತರು. ಆಗ ವಾಜಪೇಯಿ ಒಂದು ಮಾತು ಹೇಳಿದ್ದರು- ‘ ಈ ಚುನಾವಣೆ ಗೆಲ್ಲೋದು ಹೇಗೆ ಎಂಬುದು ನನಗಂತೂ ಅರ್ಥವಾಗಿಲ್ಲ. ಗ್ವಾಲಿಯರ್ ಬದಲು ನವದೆಹಲಿ ಸ್ಪರ್ಧಿಸಿದ್ದಿದ್ದರೆ ಗೆಲ್ಲುತ್ತಿದ್ದೆ ಎಂದು ಅನೇಕರು ಹೇಳುತ್ತಾರೆ. ಆದರೆ ಅಲ್ಲೂ ಸಹ ಪಕ್ಷದ ಅಭ್ಯರ್ಥಿ ಸೋತುಹೋಗಿದ್ದಾರಲ್ಲ. ಪ್ರಾಯಶಃ ಇನ್ನೂ ಐದು ಚುನಾವಣೆ ಸೆಣಸಿದರೂ, ಗೆಲ್ಲುವ ಉಪಾಯವೇನು ಎಂದು ಕೇಳಿದರೆ ನಾನು ನಿರುತ್ತರನಾಗುತ್ತೇನೆ. ರಾಜಕಾರಣಿಗಳಿಗೆ ಗೊತ್ತಿರುವುದು, ಗೊತ್ತಿಲ್ಲದಿರುವುದೆಂದರೆ ಚುನಾವಣೆ ಗೆಲ್ಲುವುದು. ಗೆದ್ದವರಿಗೆ ಮಾತ್ರ ಈ ಉಪಾಯ ಗೊತ್ತು. ಸೋತವರಿಗೆ ಗೊತ್ತಿಲ್ಲ. ಗೆದ್ದವರು ಮುಂದಿನ ಸಲ ಸೋತಾಗ ಅವರಿಗೂ ಈ ಉಪಾಯ ಮರೆತುಹೋಗಿರುತ್ತದೆ.’ ಅದಾದ ನಂತರ ವಾಜಪೇಯಿ ಚುನಾವಣೆಯಲ್ಲಿ ಸೋಲಲೇ ಇಲ್ಲ.

ಕಮ್ಯುನಿಸ್‌ಟ್ ಇಂದ್ರಜಿತ್ ಗುಪ್ತಾ (ಹನ್ನೊಂದು ಸಲ) ಅವರನ್ನು ಬಿಟ್ಟರೆ, ವಾಜಪೇಯಿ ಹನ್ನೊಂದು ಸಲ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇಂದಿಗೂ ಅತಿ ಹೆಚ್ಚು ಸಲ ಲೋಕಸಭಾ ಚುನಾವಣೆ ಗೆದ್ದ ದಾಖಲೆ ಅವರ ಹೆಸರಿನಲ್ಲಿಯೇ ಇದೆ. ಆದರೂ ಅವರು ತುರ್ತುಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ ಸೋತುಹೋಗಿದ್ದರು. ಅವರಿಗೆ ‘ಅತ್ಯುತ್ತಮ ಸಂಸದೀಯ ಪಟು’ ಪ್ರಶಸ್ತಿ ನೀಡಿ ಗೌರವಿಸಿದಾಗ, ‘ನೀವು ಸತತ ಹನ್ನೊಂದು ಬಾರಿ ಗೆಲ್ಲುತ್ತಿದ್ದೀರಲ್ಲ, ನಿಮ್ಮ ಗೆಲುವಿನ ಗುಟ್ಟೇನು ?’ ಎಂದು ಕೇಳಿದಾಗ, ‘ನಾನು ಜನ ನನ್ನನ್ನು ಆರಿಸುತ್ತಿರಬಹುದು’ ಎಂದು ಹೇಳಿದರು. (ಗುಪ್ತಾ ಅವರು ಕೋಲ್ಕತಾ ದಕ್ಷಿಣ, ಕೋಲ್ಕತಾ ಪಶ್ಚಿಮ, ಮಿಡ್ನಾಪುರ, ಬಸೀರ್‌ಹಾತ್, ಅಲಿಪುರದಿಂದ ಗೆದ್ದಿದ್ದರು.) ಅದಕ್ಕೆ ಗುಪ್ತಾ, ‘ಒಂದೇ ಕ್ಷೇತ್ರದಲ್ಲಿ ಬಹಳ ವರ್ಷ ಒಳ್ಳೆಯವರಾಗಿ ಇರುವುದು ಕಷ್ಟ. ಹೀಗಾಗಿ ಆಗಾಗ ಕ್ಷೇತ್ರ ಬದಲಿಸುತ್ತಿರಬೇಕು’ ಎಂದು ಹೇಳಿದ್ದರು. ಆದರೂ ಚುನಾವಣೆ ಗೆಲ್ಲುವ ಉಪಾಯದ ಬಗ್ಗೆ ಕೇಳಿದಾಗ ಅವರಲ್ಲೂ ಸ್ಪಷ್ಟ ಉತ್ತರ ಇರಲಿಲ್ಲ.

ವಾಜಪೇಯಿ ಅವರ ಹಾಗೆ ಹತ್ತು ಸಲ ಲೋಕಸಭೆಗೆ ಆರಿಸಿ ಬಂದವರೆಂದರೆ, ಕಮ್ಯುನಿಸ್‌ಟ್ ಸೋಮನಾಥ ಚಟರ್ಜಿ. ಆದರೆ ಚಟರ್ಜಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಮತಾ ಬ್ಯಾನರ್ಜಿ ವಿರುದ್ಧ 1984ರಲ್ಲಿ ಸೋತುಹೋಗಿದ್ದರು. ಇಂದ್ರಜಿತ್ ಗುಪ್ತಾ, ವಾಜಪೇಯಿ, ಚಟರ್ಜಿ ತಮ್ಮ ಗೆಲುವಿನ ಯಾತ್ರೆಯಲ್ಲಿ ಆಗಾಗ ಕ್ಷೇತ್ರ ಬದಲಿಸಿರಬಹುದು. ಇದೂ ಗೆಲುವಿಗೆ ಕಾರಣವಾಗಿರಲೂಬಹುದು. ಆದರೆ ಕಾಂಗ್ರೆಸ್ ನಾಯಕ, ಕನ್ನಡಿಗ ಪಿ.ಎಂ.ಸಯೀದ್ (ಇವರು ಓದಿದ್ದು ಮಂಗಳೂರಿನಲ್ಲಿ) ಅವರು 1967ರಿಂದ 2004ರವರೆಗೆ ನಡೆದ ಎಲ್ಲ ಹತ್ತು ಲೋಕಸಭಾ ಚುನಾವಣೆಗಳಲ್ಲೂ ಜಯ ಗಳಿಸಿದರು.

ಈ ಎಲ್ಲಾ ಹತ್ತು ಚುನಾವಣೆಗಳಲ್ಲೂ ಅವರು ಪ್ರತಿನಿಧಿಸಿದ್ದು ಒಂದೇ ಲಕ್ಷದ್ವೀಪ. ಸಯೀದ್ ವಿರುದ್ಧ ಯಾರೇ ನಿಂತರೂ ಠೇವಣಿ ನಷ್ಟ ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದರು. ಅದು ನಿಜವೂ ಆಗಿತ್ತು. ಅಂಥ ಸಯೀದ್ ಇದೇ ಲಕ್ಷದ್ವೀಪ ಕ್ಷೇತ್ರದಲ್ಲಿ 2004ರಲ್ಲಿ ಜೆಡಿಯು ಅಭ್ಯರ್ಥಿ ಡಾ.ಪಿ. ಪೂಕುನಿಕೊಯಾ ಎಂಬ ಅಷ್ಟೇನೂ ಪರಿಚಿತವಿರದ ಅಭ್ಯರ್ಥಿ ವಿರುದ್ಧ ಕೇವಲ 71 ಮತಗಳ ಅಂತರದಿಂದ ಸೋತುಹೋದರು. 2009ರ ಲೋಕಸಭಾ ಚುನಾವಣೆಯಲ್ಲಿ ಸಯೀದ್ ಮಗ ಮಹಮದ್ ಹಮ್ದುಲ್ಲಾ ಸಯೀದ್ ಆರಿಸಿಬಂದರು. 2014ರ ಚುನಾವಣೆಯಲ್ಲಿ ಇವರೂ ಸೋತುಹೋದರು.

ಕೆಲವರಿಗೆ ತಮ್ಮ ಕ್ಷೇತ್ರ ಪಕ್ಕದ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಂದರೆ ಒಲ್ಲೆ ಅಂತಾರೆ. ಅಲ್ಲಿ ಹೋಗಿ ಹೇಗೆ ಸ್ಪರ್ಧಿಸೋದು ? ಯಾರೂ ಪರಿಚಯವಿಲ್ಲ ಅಂತಾರೆ. ಆದರೆ ಜಾರ್ಜ್ ಫರ್ನಾಂಡಿಸ್ ಹಾಗಲ್ಲ. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಮೊದಲಬಾರಿಗೆ ಸ್ಪರ್ಧಿಸಿದ್ದು ಮುಂಬೈಯಲ್ಲಿ. ಕಾಂಗ್ರೆಸ್ ಧುರೀಣ ಎಸ್.ಕೆ. ಪಾಟೀಲ ವಿರುದ್ಧ ಸೆಣಸಿ ಗೆದ್ದರು. ತುರ್ತುಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ, ಜೈಲಿನಲ್ಲಿ ಕುಳಿತೇ ಬಿಹಾರದ ಮುಜಫರ್‌ಪುರ ಲೋಕಸಭಾ ಕ್ಷೇತ್ರದಿಂದ ಗೆದ್ದರು. ಒಂದು ದಿನವೂ ಅವರು ಪ್ರಚಾರಕ್ಕೆ ಹೋಗಲಿಲ್ಲ. ಅವರನ್ನು ಯಾರೂ ಆದರೂ ಜಾರ್ಜ್ ಗೆದ್ದರು.

ಎಲ್ಲಿಯ ಮಂಗಳೂರು? ಎಲ್ಲಿಯ ಮುಂಬೈ? ಎಲ್ಲಿಯ ಮುಜಫರ್‌ಪುರ ? ಜಾರ್ಜ್‌ಗೂ, ಬಿಹಾರ್‌ಗೂ ಸಂಬಂಧವೇ ಇಲ್ಲ. ಆದರೆ ಅವರು ಕಾಲು ಶತಮಾನ ಬಿಹಾರವನ್ನೇ ತಮ್ಮ ಕರ್ಮಭೂಮಿ ಮಾಡಿಕೊಂಡರು. ಬಿಹಾರಿ ಅಲ್ಲದಿದ್ದರೂ, ಅವರನ್ನು ಹೇಗೆ ಆರಿಸುತ್ತಿದ್ದರೋ ಆ ದೇವನೇ ಬಲ್ಲ ? ದೇವೇಗೌಡರು ಹೋಗಿ ರಾಜಸ್ಥಾನದಲ್ಲಿ ರಾಜಕೀಯ ಮಾಡಲು ಸಾಧ್ಯವೇ ? ಲಾಲೂ ಪ್ರಸಾದ ಯಾದವ್ ಅವರನ್ನು ತಮಿಳುನಾಡಿನವರು ಒಪ್ಪಿಕೊಳ್ತಾರಾ? ಮುಲಾಯಂ ಸಿಂಗ್ ಯಾದವ್ ಕರ್ನಾಟಕದಿಂದ ಸ್ಪರ್ಧಿಸಿಬಲ್ಲರಾ? ಸಾಧ್ಯವೇ ಇಲ್ಲ. ಆದರೆ ಜಾರ್ಜ್ ಮಾತ್ರ ಬಿಹಾರದಲ್ಲಿ ಆವರಿಸಿಕೊಂಡಿದ್ದರು, ಮನೆಮಾತಾಗಿದ್ದರು.

ಈ ಚುನಾವಣೆ ರಾಜಕೀಯವೇ ಬೇರೆ. ಇದು ಯಾರ ಕಲ್ಪನೆ, ತೆಕ್ಕೆಗೂ ಸಿಗುವಂಥದಲ್ಲ. ಹೀಗೆ, ಹಾಗೆ ಎಂದು ಹೇಳಲು ಬರೊಲ್ಲ. ಹತ್ತು ಚುನಾವಣೆಯಲ್ಲಿ ಒಂದೇ ಪಕ್ಷ, ಒಂದೇ ಅಭ್ಯರ್ಥಿಗೆ ಮತ ನೀಡಿದವರು ಈ ಸಲ ನಿರ್ಧಾರ ಬದಲಿಸಬಹುದು. ಈ ನಿರ್ಧಾರ ಬದಲಾವಣೆಗೆ ಹತ್ತಾರು ಕಾರಣಗಳಿರಬಹುದು. ಇವ್ಯಾವುದನ್ನೂ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಜನರ ಮೂಡು ಗಾಳಿಯಂತೆ ಬದಲಾಗಬಹುದು, ಬದಲಾಗದೆಯೂ ಇರಬಹುದು. ನಂತರ ದೇಶಾದ್ಯಂತ ಕಾಂಗ್ರೆಸ್ ವಿರೋಧಿ ಅಲೆ ಬೀಸಿ, ಇಂದಿರಾ ಗಾಂಧಿ ಸಹಿತ ಪಕ್ಷವೇ ಧೂಳಿಪಟವಾದರೂ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಕೋಟೆ ಎಂದಿನಂತೆ ಭದ್ರವಾಗಿಯೇ ಇದ್ದಿದ್ದು ನೆನಪಿಸಿಕೊಳ್ಳಿ. ಮತದಾರನ ಮನಸ್ಸಿನಲ್ಲಿ ಏನಿದೆಯೆಂಬುದು ಆ ಪರಮಾತ್ಮನಿಗೂ ಗೊತ್ತಿಲ್ಲ. ಹೀಗಿರುವಾಗ ಎರಡು ಸಾವಿರವರ್ಷಗಳ ಹಿಂದಿನ How to Win an Election ಎಂಬ ಕೃತಿಯಲ್ಲಿ ಏನಿದೆ?

ರೋಮನ್ ಕೌನ್ಸುಲ್‌ಗೆ ನಡೆದ ಚುನಾವಣೆಯಲ್ಲಿ ಮಾರ್ಕಸ್ ಟಲ್ಲಿಯಸ್ ಸಿಸೆರೋ ಸ್ಪರ್ಧಿಸಿದ್ದ. ಆತ ಮಹಾ ಮುತ್ಸದ್ದಿ, ಅದ್ಭುತ ಸಿಸೆರೋ ಅಣ್ಣ ಕ್ವಿಂಟಸ್‌ಗೆ ತನ್ನ ಸಹೋದರ ಗೆದ್ದು ಬರಬೇಕೆಂಬ ಆಸೆ. ತಮ್ಮನನ್ನು ಕುಳ್ಳಿರಿಸಿಕೊಂಡು ಚುನಾವಣೆಯಲ್ಲಿ ಗೆಲುವಿನ ತಂತ್ರ ಹೆಣೆಯುವುದು ಹೇಗೆ ಎಂಬ ಬಗ್ಗೆ ಉಪದೇಶ ಮಾಡುತ್ತಾನೆ. ‘ಮಾರ್ಕಸ್, ನಿನ್ನಲ್ಲಿ ಅದ್ಭುತವೆನಿಸುವ ಗುಣಗಳಿವೆ. ಹಾಗೆಯೇ ಕೆಲವು ಗುಣಗಳು ಇಲ್ಲ. ಇಲ್ಲದ ಗುಣಗಳನ್ನು ನೀನು ಹೇಗೆ ಮೈಗೂಡಿಸಿಕೊಳ್ಳಬೇಕೆಂದರೆ, ಹುಟ್ಟುವಾಗಲೇ ಆ ಎಲ್ಲಾ ಗುಣಗಳೂ ನಿನ್ನಲ್ಲಿ ಇದ್ದವೆಂದು ಜನ ನಂಬಬೇಕು, ಆ ರೀತಿಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂಬ ಕಿವಿಮಾತು ಹೇಳುತ್ತಾ, ‘ರೋಮ್‌ನಲ್ಲಿ ಅತ್ಯುನ್ನತ ಚುನಾವಣೆಗೆ ನಿಂತ ನಿನಗೆ ಕೆಲವು ಸಂಗತಿಗಳು ಗೊತ್ತಿರಲಿ’ ಎಂದು ಕೆಲವು ಸೂಕ್ಷ್ಮಗಳನ್ನು ಹೇಳುತ್ತಾನೆ. ಆ ಪೈಕಿ ಕೆಲವು,

* ಮತದಾರರಿಗೆ ಯಾವುದು ಇಷ್ಟವೋ ಅದನ್ನೇ ಹೇಳು. ಮತದಾರರಿಗೆ ಆಶ್ವಾಸನೆಗಳನ್ನು ಕೊಡು. ಅವೆಲ್ಲವೂ ಈಡೇರಿಸುವಂಥದ್ದಾಗಿರಲಿ. ಐದು ಆಶ್ವಾಸನೆಗಳನ್ನು ಕೊಡಬೇಡ. ಕನಿಷ್ಠ ಇಪ್ಪತ್ತೈದನ್ನಾದರೂ ಕೊಡು. ಆ ಪೈಕಿ ಐದಾರನ್ನು ಈಡೇರಿಸಲು ಆಗದಿದ್ದರೂ ಪರವಾಗಿಲ್ಲ. ಹೆಚ್ಚು ಆಶ್ವಾಸನೆಗಳನ್ನು ನೀಡಿದಷ್ಟೂ, ಆರಿಸಿ ಬಂದ ನಂತರ ಅವನ್ನು ಈಡೇರಿಸಲು ಕ್ರಿಯಾಶೀಲನಾಗುತ್ತೀಯಾ. ಹೀಗಾಗಿ ಧಾರಾಳವಾಗಿ ಆಶ್ವಾಸನೆ ಕೊಡು, ಆಗ ನಿನ್ನ ಬಗ್ಗೆ ಹೊಸ ಭರವಸೆ ಮೂಡುತ್ತದೆ.

* ನೀನು ಯಾರ್ಯಾರಿಗೆ ಸಹಾಯ ಮಾಡಿದ್ದೀಯೋ ಅವರೆಲ್ಲರಿಗೂ ಋಣ ತೀರಿಸಲು ಇದೇ ಸೂಕ್ತ ಸಮಯ ಎಂದು ಹೇಳು. ಅವರೆಲ್ಲರನ್ನೂ ಪ್ರಚಾರಕ್ಕೆ ಬಳಸಿಕೊ. ನಿನ್ನಿಂದ ಸಹಾಯ ಪಡೆಯದವರಿಗೆ, ನನಗೆ ಈಗ ಸಹಾಯ ಮಾಡಿದರೆ, ಆರಿಸಿ ಬಂದ ಬಳಿಕ ಉಪಕಾರ ಮಾಡುತ್ತೇನೆ ಎಂದು ಹೇಳು.

* ಪ್ರಚಾರದಷ್ಟೇ ಎದುರಾಳಿ ಅಭ್ಯರ್ಥಿಯ ಅಪಪ್ರಚಾರವೂ ಮುಖ್ಯ. ಎದುರಾಳಿಯ ಒಂದೇ ಒಂದು ದೌರ್ಬಲ್ಯವನ್ನೂ ಎತ್ತಿ ತೋರಿಸುವ ಅವಕಾಶವನ್ನು
* ಪ್ರತಿ ಮತವೂ ಮುಖ್ಯ. ನಿನಗೆ ಬರುವ ಮತಗಳು ಹೇಗಿದ್ದರೂ ಬರುತ್ತವೆ. ಬರದಿರುವ ಮತಗಳನ್ನು ಸೆಳೆಯುವುದು ಹೇಗೆ ಎಂದು ಯೋಚಿಸು.
* ಜನ ನಿನ್ನನ್ನು ನಂಬಬೇಕು. ನಿನ್ನಿಂದ ತಪ್ಪಾದರೆ ಕ್ಷಮೆಯಾಚಿಸು.
* ಜನರಲ್ಲಿ ಭರವಸೆ ಮೂಡಿಸಿ, ನೀನೇ ಅವರಿಗೆ ಅನಿವಾರ್ಯ ಎಂಬ ವಿಶ್ವಾಸ ಮೂಡಿಸು.
* ನಿನ್ನ ಭಾಷೆ ಯಾವತ್ತೂ ಸುಸಂಸ್ಕೃತವಾಗಿ, ಸಂಸ್ಕಾರಯುತವಾಗಿರಲಿ.
* ಜನರು ಎಷ್ಟೇ ಕಠಿಣವಾಗಿ ವರ್ತಿಸಲಿ, ಸಂಯಮ ಕಳೆದುಕೊಳ್ಳಬೇಡ. ಜನರು ಹೇಗಾದರೂ ವರ್ತಿಸಲಿ, ನೀನು ವರ್ತಿಸುವಂತಿಲ್ಲ.

* ಜನರ ಸಮಸ್ಯೆ ಬಗೆಹರಿಸಲಾಗದಿದ್ದರೂ ಪರವಾಗಿಲ್ಲ, ಅವರು ಹೇಳುವುದನ್ನು ಕೇಳು.
* ಮತದಾರರು ತಮ್ಮ ಮತವನ್ನು ಪುಕ್ಕಟೆಯಾಗಿ ಕೊಡುವುದಿಲ್ಲ. ಅವರು ಹಣ ಅಪೇಕ್ಷಿಸುವುದಿಲ್ಲ. ನಿನ್ನ ವಿಶ್ವಾಸವನ್ನು ಬಯಸುತ್ತಾರೆ. ಅದಕ್ಕೆ ಚ್ಯುತಿ ಮಾಡಬೇಡ.
ಆ ಚುನಾವಣೆಯಲ್ಲಿ ಅಣ್ಣ ಹೇಳಿದಂತೆ ಕೇಳಿದ ಮಾರ್ಕಸ್ ಸಿಸೆರೋ ಭಾರಿ ಅಂತರದಿಂದ ಚುನಾವಣೆ ಗೆದ್ದ!
ಈಗಿನ ಅಭ್ಯರ್ಥಿಗಳಿಗೆ ಇವನ್ನೆಲ್ಲ ಹೇಳಿಕೊಡಬೇಕಿಲ್ಲ. ಆದರೆ ಚುನಾವಣೆ ವರಸೆಗಳು ಮಾತ್ರ ಬದಲಾಗಿಲ್ಲ. ಅಂದು ಹೇಗಿದ್ದವೋ, ಇಂದೂ ಹಾಗೇ ಇವೆ. ಹಣಬಲ, ತೋಳ್ಬಲ ಎಕ್ಸ್ಟ್ರಾ ಬೇಕು.
ಇದೇನೇ ಇರಲಿ, ಚುನಾವಣೆಯ ಮರ್ಮ ಅರಿತವರಾರು ?

 

Leave a Reply

Your email address will not be published. Required fields are marked *

17 − thirteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top