ಇದು ಪತ್ರಕರ್ತರಿಗೆ ಪಾಠವಾಗಬೇಕು, ಎಚ್ಚರಿಕೆ ಗಂಟೆ ಆಗಬೇಕು!

Posted In : ಅಂಕಣಗಳು, ನೂರೆಂಟು ವಿಶ್ವ

‘ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು?’

ಇತ್ತೀಚೆಗೆ ಟಿವಿ9 ಸುದ್ದಿ ಚಾನೆಲ್ ಈ ಪ್ರಶ್ನೆಯನ್ನು ಸುಮಾರು ಹದಿನೈದು ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೇಳಿತು. ಕೆಲವರು ಸಿದ್ದರಾಮಯ್ಯ ಅಂದರು. ಕೆಲವರು ಯಡಿಯೂರಪ್ಪ ಅಂದರು. ಇನ್ನು ಕೆಲವರು ಮೋದಿ ಅಂದರು. ಒಬ್ಬಳಂತೂ ಕರ್ನಾಟಕದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಅಂದಳು. ಇನ್ನೊಬ್ಬಳಂತೂ ನನಗೆ ಗೊತ್ತಿಲ್ಲ, ಈ ವಿಷಯದಲ್ಲಿ ತನಗೆ ಜ್ಞಾನವಿಲ್ಲ ಅಂತ ಪ್ರಾಮಾಣಿಕವಾಗಿ ಹೇಳಿದಳು. ವರದಿಗಾರ ಸಂದರ್ಶಿಸಿದ ಆ ಎಲ್ಲ ಅಥವಾ ಯುವಜನರ ಪೈಕಿ ಒಬ್ಬರೂ ‘ಕುಮಾರಸ್ವಾಮಿ’ ಎಂದು ಹೇಳಲಿಲ್ಲ. ಕಳೆದ ಎರಡು-ಮೂರು ತಿಂಗಳುಗಳಿಂದ ರಾಜ್ಯಕ್ಕೆ ರಾಜ್ಯವೇ ಚುನಾವಣೆಯಲ್ಲಿ ಮುಳುಗಿದ್ದರೂ, ಒಂದು ತಿಂಗಳಿನಿಂದ ಹೊಸ ಸರಕಾರ ಹಾಗೂ ಮುಖ್ಯಮಂತ್ರಿ ಆಯ್ಕೆ ಪ್ರಹಸನ ನಡೆಯುತ್ತಿದ್ದರೂ, ಆ ಕಾಲೇಜ್ ವಿದ್ಯಾರ್ಥಿಗಳಿಗೆ ನಮ್ಮ ನೂತನ ಮುಖ್ಯಮಂತ್ರಿ ಯಾರೆಂಬುದೇ ಗೊತ್ತಿರಲಿಲ್ಲ. ಇವರೇನು ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿರಲಿಲ್ಲ. ಕಾಲೇಜು, ಕ್ಯಾಂಪಸ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆಗಳಲ್ಲಿ ವಿದ್ಯಾರ್ಥಿಗಳನ್ನು ಸಂದರ್ಶಿಸಲಾಗಿತ್ತು. ಆದರೆ ಅವರೆಲ್ಲರೂ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದರು.

ತಕರಾರಿರುವುದು ನಮ್ಮ ಯುವಜನರ ಬಗ್ಗೆ ಅಲ್ಲ. ಅವರ ರಾಜಕೀಯ ಅಥವಾ ಸಾಮಾನ್ಯಜ್ಞಾನದ ಬಗ್ಗೆ ಅಲ್ಲ ಅಥವಾ ನಮ್ಮ ರಾಜಕೀಯ ವ್ಯವಸ್ಥೆ ಬಗ್ಗೆ ಸಹ ಅಲ್ಲ. ನನಗೆ ಅತೀವ ಬೇಸರವಾಗಿದ್ದು ನಮ್ಮ ಬಗ್ಗೆ. ಅಂದರೆ ಪತ್ರಕರ್ತರ ಬಗ್ಗೆ. ನಮ್ಮ ಪತ್ರಿಕೆಯೂ ಸೇರಿದಂತೆ, ಎಲ್ಲ ಪತ್ರಿಕೆಗಳು, ನ್ಯೂಸ್ ಚಾನೆಲ್‌ಗಳು ರಾಜಕೀಯ ಸುದ್ದಿಯನ್ನು ‘ಮಹಾಪ್ರಸಾದ’ ಎಂಬಂತೆ ವರದಿ ಮಾಡುತ್ತವೆ. ಎಲ್ಲ ಪತ್ರಿಕೆಗಳ ತುಂಬಾ ರಾಜಕೀಯ ವರದಿಗಳೇ. ರಾಜಕಾರಣಿಗಳು ಏನೇ ಹೇಳಲಿ, ಏನೇ ಹೇಳದಿರಲಿ ಸುದ್ದಿ. ದೇವೇಗೌಡರು ಗೊಣಗಿದರು ಸುದ್ದಿ, ಯಡಿಯೂರಪ್ಪ ಮೌನಕ್ಕೆ ಶರಣಾದರೂ ಸುದ್ದಿ. ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ಹೋದರೆ ಟಿವಿಯಲ್ಲಿ ಅರ್ಧಗಂಟೆ ಸುದ್ದಿ, ಒಂದು ಗಂಟೆ ಚರ್ಚೆ.

ಡಿಕೆ ಶಿವಕುಮಾರಗೆ ಬಿಪಿ ತುಸು ಜಾಸ್ತಿಯಾದರೆ ಅದು ಬ್ರೇಕಿಂಗ್ ನ್ಯೂಸ್, ರೇವಣ್ಣ ಜ್ಯೋತಿಷಿಗಳನ್ನು ಭೇಟಿಯಾದರೆ ಅದು ಸುದ್ದಿ. ವಾಸ್ತು ಸಲಹೆ ಕೇಳಿದರೆ ಬಾಕ್‌ಸ್ ಐಟೆಂ. ಮಾರ್ಗರೆಟ್ ಆಳ್ವಾ ಮನೆಗೆ ಹಾವು ಬಂದರೂ ಸುದ್ದಿ. ಮುಖ್ಯಮಂತ್ರಿ ಜನಾರ್ದನ ಹೋಟೆಲ್‌ನಲ್ಲೋ, ವಿದ್ಯಾರ್ಥಿ ಭವನದಲ್ಲೋ ದೋಸೆ ತಿಂದರೆ ಫೋಟೊ. ಮುಖ್ಯಮಂತ್ರಿ ಕಾರಿನ ಮೇಲೆ ಕಾಗೆ ಬಂದು ಕುಳಿತರೆ, ಒಂದು ವಾರ ಭರ್ಜರಿ ಸುದ್ದಿ. ನ್ಯೂಸ್ ಚಾನೆಲ್‌ಗಳಲ್ಲಿ ಮೂರ್ನಾಲ್ಕು ಗಂಟೆ ಚರ್ಚೆ, ಜ್ಯೋತಿಷಿಗಳ ವಿಶ್ಲೇಷಣೆ…

ಕಳೆದ ಐದು ವರ್ಷಗಳ ಪತ್ರಿಕೆಗಳ ಪೈಕಿ ಯಾವುದೇ ಒಂದು ದಿನದ ಪತ್ರಿಕೆಯನ್ನು ಕಣ್ಮುಚ್ಚಿ ಆಯ್ದು ನೋಡಿ, ಮುಖಪುಟದಲ್ಲಿ ಕನಿಷ್ಠ ಒಂದು ಸುದ್ದಿಯಾದರೂ ರಾಜಕೀಯಕ್ಕೆ ಸಂಬಂಧಿಸಿದ್ದೇ. ಸೂರ್ಯನಿಲ್ಲದೇ ಬೆಳಗಾಗಬಹುದು. ಆದರೆ ರಾಜಕೀಯ ಸುದ್ದಿಗಳಿಲ್ಲದೇ ಬೆಳಗೂ ಆಗುವುದಿಲ್ಲ, ಪತ್ರಿಕೆಗಳೂ ಹೊರಬರುವುದಿಲ್ಲ. ಟಿವಿ ಪತ್ರಕರ್ತರಂತೂ ಮುಖ್ಯಮಂತ್ರಿ ಹಾಗೂ ನಾಯಕರ ಮನೆಮುಂದೆ ಸದಾ ಹಾಜರ್!

ಒಂದೇ ದಿನ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ವಿಶ್ವವೇ ಬೆರಗಾಗುವಂತೆ, ನೂರು ಉಪಗ್ರಹಗಳನ್ನು ಹಾರಿಸಿದರು. ನಿಸ್ಸಂದೇಹವಾಗಿ, ಅದು ಮುಖಪುಟದಲ್ಲಿ ಪ್ರಧಾನ ಸುದ್ದಿ ಎಂಟು ಕಾಲಮ್ಮು, ದಪ್ಪ ಅಕ್ಷರದಲ್ಲಿ ಹೆಡ್‌ಲೈನ್ ಹಾಕಿ ಕನಿಷ್ಠ ಮುಕ್ಕಾಲು ಪುಟ ಮಾಡಲೇಬೇಕಾದ ಅಪರೂಪದ, ಅದ್ಭುತ ಸುದ್ದಿ.
ಸರಿಯೇ.

ಯಡವಟ್ಟಾಗಿದ್ದೇನೆಂದರೆ, ಅದೇ ದಿನ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂದೇ ಭಾವಿಸಲಾಗಿದ್ದ ಶಶಿಕಲಾ ನಟರಾಜ್‌ಗೆ ಸುಪ್ರೀಂ ಕೋರ್ಟ್ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ನೀಡಿತು. ಅಲ್ಲಿಗೆ ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ ಪತ್ರಕರ್ತರ ಕಣ್ಣಿಗೆ ಸ್ವಲ್ಪ ಮಹತ್ವ ಕಳೆದುಕೊಂಡಿತು. ಬೇರೆ ಪತ್ರಿಕೆಯ ಬಗ್ಗೆ ಹೇಳುತ್ತಿಲ್ಲ, ಮರುದಿನ ನಮ್ಮ ಪತ್ರಿಕೆಯಲ್ಲೇ ‘ನೂರು ಉಪಗ್ರಹಗಳು ಆಗಸಕ್ಕೆ, ಶಶಿಕಲಾ ನಟರಾಜನ್ (ಪರಪ್ಪನ) ಅಗ್ರಹಾರಕ್ಕೆ’ ಎಂಬ ಶೀರ್ಷಿಕೆಯಲ್ಲಿ, ಆ ಸುದ್ದಿಗೆ ನಾಲ್ಕು ಹಾಗೂ ಈ ಸುದ್ದಿಗೆ ನಾಲ್ಕು ಕಾಲಮ್ಮು ಜಾಗ ನೀಡಲಾಗಿತ್ತು. ಆ ದಿನದ ಮಟ್ಟಿಗಾದರೂ ವಿಜ್ಞಾನಿಗಳ ಸಾಧನೆ ಪತ್ರಿಕೆಗಳಲ್ಲಿ ವಿಜೃಂಭಿಸಬಹುದಿತ್ತು. ಶಶಿಕಲಾ ಜೈಲು ಸೇರಿದ್ದು ಖುಷಿಪಡುವಂಥ ಸುದ್ದಿಯಾಗಿರಲಿಲ್ಲ. ಅಷ್ಟಕ್ಕೂ ಇರಬೇಕಾದದ್ದೇ ಅಲ್ಲಾಗಿತ್ತು. ನಮ್ಮ ವಿಜ್ಞಾನಿಗಳ ಸಾಧನೆಗೆ ವಿಶ್ವವೇ ತಲೆದೂಗಿತ್ತು. ಅದೊಂದು ದಿನವನ್ನು ರಾಜಕೀಯೇತರ ಸುದ್ದಿಗೆ ಮುಖಪುಟವನ್ನು ಬಿಟ್ಟುಕೊಡಲು ಪತ್ರಕರ್ತರ ಮನಸ್ಸು ಸಿದ್ಧವಿರಲಿಲ್ಲ.

ಪಾಲಿಟಿಕ್ಸ್, ಸಿನಿಮಾ, ಕ್ರಿಕೆಟ್ ಹಾಗೂ ಕ್ರೈಮ್ ಸುದ್ದಿ ಇಲ್ಲದೇ ಮುಖಪುಟ ಮಾಡಿ ಅಂದರೆ ಪತ್ರಕರ್ತರಿಗೆ ಸಾಧ್ಯವೇ ಇಲ್ಲ. ಸೋಲು, ಗೆಲುವು ಹಾಗೂ ಡ್ರಾ ಎಂಬ ಪದ ಬಳಸದೇ ಕ್ರೀಡಾವರದಿ ಬರೆಯಿರಿ ಎಂದ ಹಾಗೆ. ಪತ್ರಕರ್ತರು ತರಗಾಬರಗಾ ಆಗುತ್ತಾರೆ.

ಟಿವಿ ನ್ಯೂಸ್ ಚಾನೆಲ್‌ಗಳು ನಿಂತಿರುವುದೇ ಇವುಗಳ ಮೇಲೆ. ಅವುಗಳ ಜೀವಾಳ. ನಿಜಕ್ಕೂ ಓದುಗರು ಬಯಸುತ್ತಾರೆಂದು ಈ ಪರಿ ರಾಜಕೀಯ ಸುದ್ದಿಗಳನ್ನು ಕೊಡುತ್ತಾರಾ ಅಥವಾ ತಮ್ಮಷ್ಟಕ್ಕೆ ತಾವು ಭ್ರಮಿಸಿಕೊಂಡು ಆ ಸುದ್ದಿಗೆ ಅಂಥ ಮಹತ್ವ ನೀಡುತ್ತಾರಾ ಎಂಬುದು ಚರ್ಚಾರ್ಹ. ಪತ್ರಕರ್ತರಿಗೆ ಸುದ್ದಿ ಅಂದರೆ ರಾಜಕೀಯ ಸುದ್ದಿ. ಸಂದರ್ಶನ ಅಂದ್ರೆ ರಾಜಕಾರಣಿಗಳ ಸಂದರ್ಶನ. ಪತ್ರಿಕಾಗೋಷ್ಠಿ ಅಂದ್ರೆ ಮಂತ್ರಿಗಳು, ರಾಜಕೀಯ ನಾಯಕರ ಪತ್ರಿಕಾಗೋಷ್ಠಿ ಎಂಬಂತಾಗಿದೆ. ಪತ್ರಕರ್ತರ ಚಿಂತನೆ, ಆಲೋಚನೆ, ಸುತ್ತಾಟಗಳೆಲ್ಲ ಈ ರಾಜಕಾರಣಿಗಳು, ಮಂತ್ರಿಗಳ ಸುತ್ತವೇ ಗಿರಕಿ ಹೊಡೆಯುತ್ತವೆ. ಹೀಗಾಗಿ ಪತ್ರಿಕೆಗಳಲ್ಲೂ ಪ್ರತಿಬಿಂಬಿತವಾಗುತ್ತದೆ. ನಮ್ಮ ಆದ್ಯತೆ, ಪ್ರಾಧಾನ್ಯಗಳೆಲ್ಲ ಆ ಸುದ್ದಿಯ ಮೇಲೆಯೇ.

ನಮ್ಮ ಪತ್ರಿಕೆ ಹಾಗೂ ಟಿವಿ ನ್ಯೂಸ್ ಚಾನೆಲ್‌ಗಳನ್ನು ನೋಡಿದರೆ, ರಾಜಕಾರಣಿಗಳು ಮಾತ್ರ ಸುದ್ದಿಗೆ ಅರ್ಹರು, ಅವರು ಹೇಳಿದ್ದು, ಮಾಡಿದ್ದು ಮಾತ್ರ ಸುದ್ದಿ ಎಂಬ ಭಾವನೆ ಮೂಡಿದರೆ ಅಚ್ಚರಿಯಿಲ್ಲ. ರಾಜಕಾರಣಿಗಳೇನಾದರೂ ಪತ್ರಕರ್ತರನ್ನು ಇನ್ನೂ ಹತ್ತಿರಕ್ಕೆ ಬಿಟ್ಟುಕೊಂಡರೆ, ಅವರ ಬಗ್ಗೆ ಇನ್ನೇನೆಲ್ಲ ವರದಿಗಳನ್ನು ಓದಬೇಕಾಗುತ್ತಿತ್ತೇನೋ?

ನಮ್ಮ ಸುತ್ತ ಎಷ್ಟೆಲ್ಲ ಒಳ್ಳೆಯ ಕೆಲಸಗಳಾಗುತ್ತಿವೆ. ಮಹಾನ್ ಸಾಧಕರಿದ್ದಾರೆ, ಅಪ್ರತಿಮ ಯಶಸ್ಸನ್ನು ಸಾಧಿಸಿದವರಿದ್ದಾರೆ. ಪ್ರಗತಿಪರ ಕೃಷಿಕರಿದ್ದಾರೆ. ಜೀವನ ಸಾಗಿಸುತ್ತ ಅಸಾಮಾನ್ಯ ಸಾಧನೆ ಮಾಡಿದವರಿದ್ದಾರೆ. ತಮ್ಮ ವೈಕಲ್ಯ ಮರೆತು ಅಪರಿಮಿತ ಯಶಸ್ಸು ಸಾಧಿಸಿದವರಿದ್ದಾರೆ. ಅಂಥವರು ಪತ್ರಿಕೆಯ ಮುಖಪುಟದಲ್ಲಿ ಬರುವುದೇ ಇಲ್ಲ. ಇವರೆಲ್ಲ ನಮಗೆ ರಾಜಕಾರಣಿಗಳಿಗಿಂತ ಶ್ರೇಷ್ಠರು, ಆದರ್ಶಜೀವಿಗಳು, ಅನುಕರಣೀಯರು ಎಂದು ನಮಗೆ ಅನಿಸುವುದಿಲ್ಲ. ಮೊನ್ನೆ ನಡೆದ ಸಿಬಿಎಸ್‌ಇ ಪರೀಕ್ಷೆಯಲ್ಲಿ ಭಾರತಕ್ಕೆ ದಿಲ್ಲಿಯ ಮೇಘನಾ ಶ್ರೀವಾಸ್ತವ ಎಂಬ ಹೆಣ್ಣುಮಗಳು ಸಾರ್ವಕಾಲಿಕ ದಾಖಲೆ ಎಂಬಂತೆ, 500 ಅಂಕಗಳಿಗೆ 499 ಅಂಕಗಳನ್ನು ಗಳಿಸಿದಳು.

ಮರುದಿನ ಯಾವ ಪತ್ರಿಕೆಗಳಲ್ಲೂ ಆ ಸುದ್ದಿ ಮುಖಪುಟದಲ್ಲಿ ವರದಿಯಾಗಿರಲಿಲ್ಲ. ಇಷ್ಟು ವರ್ಷಗಳಲ್ಲಿ ಅಷ್ಟೊಂದು ಅಂಕಗಳನ್ನು ಯಾರೂ ತೆಗೆದಿರಲಿಲ್ಲ. ಹಿಂದಿನ ದಿನ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ದೀದಿಯೇನಾದರೂ ಪ್ರಧಾನಿ ಮೋದಿಯವರನ್ನು ಬೈಯ್ದಿದ್ದರೆ ಅದೇ ರಾಷ್ಟ್ರಕ್ಕೆಲ್ಲ ದೊಡ್ಡ ಸುದ್ದಿ. ಅದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೆದ್ದುಪೆದ್ದಾಗಿ ಕೋಕಾ-ಕೋಲಾ, ಮೆಕ್‌ಡೊನಾಲ್‌ಡ್ ಬಗ್ಗೆ ಮಾತಾಡಿದ್ದಿದ್ದರೆ, ಅದು ಇನ್ನೂ ದೊಡ್ಡ ಸುದ್ದಿ. ಇಲ್ಲಿ ತನಕ ಅದೇನು ಪ್ರಯೋಜನವಾಗಿದೆಯೋ ಗೊತ್ತಿಲ್ಲ, ಇಂಥ ಬಾಲಿಶ, ವೈಯಕ್ತಿಕ, ಕೀಳು ಅಭಿರುಚಿ ಹೇಳಿಕೆಗಳೇ ಪತ್ರಿಕೆಗಳ ಮುಖಪುಟಗಳನ್ನು ಅಲಂಕರಿಸುತ್ತಿವೆ. ರೈಯಂಥವರ ಒಂದು ಅವಿವೇಕಿ ಹೇಳಿಕೆ ಆ ದಿನದ ಮುಖಪುಟ ನಿರ್ಧರಿಸಬಲ್ಲವು. ಕುಮಾರಸ್ವಾಮಿ, ರೇವಣ್ಣ, ಯಡಿಯೂರಪ್ಪನಂಥವರ ಒಂದು ಹೇಳಿಕೆ ಮುಖಪುಟವನ್ನು ಬದಲಿಸಬಲ್ಲವು.

ರಾಜಕಾರಣಿಗಳ ಹೇಳಿಕೆಗಳನ್ನೆಲ್ಲ ಮುಖಪುಟ ಸುದ್ದಿಯಾಗಿಸುವ ಪತ್ರಿಕೆಗಳು, ಅವರೇನಾದರೂ ಒಂದು ದಿನ ಮಾತಾಡದೇ ಕಡುಮೌನ ಧರಿಸಿದರೆ, ಅದೂ ದೊಡ್ಡ ಸುದ್ದಿಯೇ. ಪತ್ರಿಕೆಗಳಿಗೆ ರಾಜಕಾರಣಿಗಳು ಚಿಛಿಛಿಜಿಟ್ಞ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಯಾವುದೋ ಒಂದು ರಾಜಕೀಯ ನಿರ್ಧಾರಕ್ಕೆ ಸಿದ್ದರಾಮಯ್ಯನವರ ಪ್ರತಿಕ್ರಿಯೆಯನ್ನು ಸುದ್ದಿಯ ಜತೆಗೆ ಪ್ರಕಟಿಸಿದರೆ ಓಕೆ. ಆದರೆ ಭಾರತೀಯ ಹಾಕಿ ತಂಡ ಫೈನಲ್‌ನಲ್ಲಿ ಅದಕ್ಕೂ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಬೇಕಾ? ಭಾರತೀಯ ಗಣಿತಜ್ಞ ಕಗ್ಗಂಟಾಗಿದ್ದ ಸೂತ್ರ ವಿವರಿಸಿದರೆ, ಸಮಸ್ಯೆ ಬಿಡಿಸಿದರೆ ಅದಕ್ಕೂ ಕುಮಾರಸ್ವಾಮಿಯವರ ಹೇಳಿಕೆ ಕೇಳಿ ಸುದ್ದಿ ಜತೆಗೆ ಮುಖಪುಟದಲ್ಲಿ ಪ್ರಕಟಿಸುವುದು ಎಷ್ಟು ಸರಿ? ರೈತನೊಬ್ಬನ ಕೃಷಿ ಸಾಧನೆಗೆ ಪತ್ರಕರ್ತರೆಂದಾದರೂ ಕೃಷಿ ವಿಜ್ಞಾನಿಯೊಬ್ಬನ ಪ್ರತಿಕ್ರಿಯೆ ಪ್ರಕಟಿಸಿದ್ದನ್ನು ನೋಡಿದ್ದೀರಾ?

ಜಗತ್ತಿನ ಯಾವ ದೇಶದಲ್ಲೂ ಅಲ್ಲಿನ ಪತ್ರಿಕೆಗಳು ರಾಜಕಾರಣಿಗಳು ಈ ಪರಿ ಮಹತ್ವ ನೀಡಿದ್ದನ್ನು ನಾನಂತೂ ನೋಡಿಲ್ಲ. ರವಾಂಡದಲ್ಲಿ ಒಂದು ವಾರವಿದ್ದರೂ ಅಲ್ಲಿನ ಅಧ್ಯಕ್ಷನ ಫೋಟೊವನ್ನು ಕೊನೆಗೂ ರಷ್ಯಾದ ಸೇಂಟ್ ಪೀಟರ್‌ಸ್ಬರ್ಗ್‌ನಲ್ಲಿ ನಾನು ಒಂದು ವಾರವಿದ್ದೆ. ಅಲ್ಲಿ ಜಿ-20 ಶೃಂಗಸಭೆ ಏರ್ಪಟ್ಟಿತ್ತು. ವಿಶ್ವದ ಬಲಿಷ್ಠ ಇಪ್ಪತ್ತು ದೇಶಗಳ ಮುಖ್ಯಸ್ಥರು ಮೂರು ದಿನಗಳ ಕಾಲ ಸಭೆ ಸೇರಿದ್ದರು. ಅಂಥ ಶೃಂಗಸಭೆ ದಿಲ್ಲಿಯಲ್ಲಿ ಅಲ್ಲ, ಬೆಂಗಳೂರಿನಲ್ಲಿ ನಡೆದರೆ, ಕನ್ನಡದ ಎಲ್ಲ ಪತ್ರಿಕೆಗಳೂ ತಮ್ಮದು ರಷ್ಯಾ, ಅಮೆರಿಕ, ಜರ್ಮನಿ, ಜಪಾನ್ ಆವೃತ್ತಿಯಿದ್ದಂತೆ ಭಾವಿಸಿ ಕನಿಷ್ಠ ಹತ್ತು ಪುಟಗಳನ್ನು ಈ ಸುದ್ದಿಗೆ ಮೀಸಲಿರಿಸುತ್ತಿದ್ದವು. ಶೃಂಗಸಭೆಯಲ್ಲಿ ಪಾಲ್ಗೊಂಡ ಯಾವ ಮುಖ್ಯಸ್ಥನಿಗೂ ಕನ್ನಡ ಓದಲು ಬರದಿದ್ದರೂ ಪುಟಗಳನ್ನು ತೆಗೆದಿರಿಸುತ್ತಿದ್ದವು. ಆದರೆ ಸೇಂಟ್ ಪೀಟರ್‌ಸ್ಬರ್ಗ್‌ನ ಪ್ರಮುಖ ಪತ್ರಿಕೆಗಳಲ್ಲಿ ಈ ಶೃಂಗಸಭೆ ಸುದ್ದಿ ಮುಖಪುಟದಲ್ಲಿ ಫೋಟೊ ಜತೆಗೆ ಮೂರು ಕಾಲಮ್ಮುಗಳಿಗೆ ಮಾತ್ರ ಸೀಮಿತವಾಗಿತ್ತು. ಪತ್ರಿಕೆ ತೆರೆಯುತ್ತಾ ಹೋದರೆ, ಎಷ್ಟೋ ಪುಟಗಳ ಬಳಿಕ ಒಂದು ಪುಟದಲ್ಲಿ ಈ ಸುದ್ದಿ!

ಅಮೆರಿಕದ ಪತ್ರಿಕೆಗಳಲ್ಲಿ ಅಧ್ಯಕ್ಷನ ಫೋಟೊ, ಸುದ್ದಿಯನ್ನು ಪ್ರತಿದಿನವೂ ಪ್ರಕಟಿಸುವುದಿಲ್ಲ. ಭಾರತದ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದರೆ, ನಮ್ಮ ಪತ್ರಿಕೆಗಳು ಪ್ರತಿದಿನ ಕನಿಷ್ಠ ಒಂದಿಡಿಪುಟ ಮೀಸಲಾಗಿರಿಸುತ್ತವೆ. ಇನ್ನು ಮುಖಪುಟದಲ್ಲಿ ಒಂದೆರಡು ಜಾಗ ಬಿಡಲೇಬೇಕಲ್ಲ. ಅದೇ ಅಮೆರಿಕದ ಪತ್ರಿಕೆಗಳಲ್ಲಿ ಆ ಸುದ್ದಿ ಹಾಗೂ ಆ ಫೋಟೊ ಪ್ರಕಟವಾದರೆ ಪುಣ್ಯ. ತಮ್ಮ ಅಧ್ಯಕ್ಷರ ಹೇಳಿಕೆಯಿಂದ ಬಹುಸಂಖ್ಯಾತ ಅಮೆರಿಕನ್‌ರಿಗೆ ಅನ್ವಯವಾಗುವುದಾದರೆ ಆ ಸುದ್ದಿಗೆ ಮಹತ್ವ. ಇಲ್ಲದಿದ್ದರೆ ಅದು ಒಳಪುಟಗಳಿಗೆ ಹೋಗಿರುತ್ತದೆ.

ರಾಜಕಾರಣಿಗಳು, ಮಂತ್ರಿಗಳು ಹೇಳಿದ್ದೆಲ್ಲ ಸುದ್ದಿಯಾಗುವುದು ನಮ್ಮ ದೇಶದಲ್ಲಿ ಮಾತ್ರ. ರಾಜಕಾರಣಿಗಳ ಉತ್ತಮ ಕೃತಿ ನಿಶ್ಚಿತವಾಗಿಯೂ ಸುದ್ದಿಯೇ. ಆದರೆ ಹೇಳಿದ್ದೆಲ್ಲ ಸುದ್ದಿ ಆಗಬೇಕಿಲ್ಲ. ದುರ್ದೈವ ಅಂದ್ರೆ, ರಾಜಕಾರಣಿಗಳ ಹೇಳಿಕೆಗಳೇ ಸುದ್ದಿ ಎಂದು ನಾವು ಭಾವಿಸಿದ್ದೇವೆ. ಪತ್ರಿಕೋದ್ಯಮ ನಿಂತಿರುವುದೇ ಪತ್ರಕರ್ತರ ಹೇಳಿಕೆಗಳ ಮೇಲೆ ಎಂಬಂತಾಗಿದೆ. ಸ್ಟೇಟ್‌ಮೆಂಟೇಡ್(ಹೇಳಿಕೆ) ಜರ್ನಲಿಸಮ್‌ನಲ್ಲಿರುವುದು ಸರಿ. ಆದರೆ ವಿಚಿತ್ರವೆಂದರೆ ಸ್ಟೇಟ್‌ಮೆಂಟ್‌ಗಳೇ ಜರ್ನಲಿಸಂ ಆಗಿಬಿಟ್ಟಿದೆ.

ಪತ್ರಿಕೆಗಳ ತುಂಬಾ ರಾಜಕಾರಣಿಗಳ ವಿಷಗಳೇ, ಬರೀ ಜಗಳ, ಹೇಳಿಕೆ, ಪ್ರತಿಕ್ರಿಯೆ, ಟೀಕೆ, ಪ್ರತಿಟೀಕೆಗಳೇ. ಅದರಿಂದ ಯಾರಿಗೆ ಪ್ರಯೋಜನವಾಗಿದೆ? ಬಿಜೆಪಿಯ ರೇಣುಕಾಚಾರ್ಯನೋ, ಹಾಲಪ್ಪನೋ, ರಾಮದಾಸನೋ ರಾಹುಲ್ ಗಾಂಧಿ ಟೀಕಿಸಿದರೆ, ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಅದರಿಂದ ಯಾರಿಗಾದರೂ ನಯಾಪೈಸೆ ಪ್ರಯೋಜನವಿದೆಯಾ? ಆದರೂ ನಾವು ಅದನ್ನು ಪ್ರಕಟಿಸುತ್ತೇವೆ. ಹೇಗಿದೆ ನಮ್ಮ ಜರ್ನಲಿಸಮ್ಮು?!

ವಿಧಾನಸಭೆ ಸಂದರ್ಭದಲ್ಲಿ ಮೂರು ಪಕ್ಷಗಳ ನಾಯಕರ ನಾಯಿ-ನರಿ ಕಚ್ಚಾಡಿಕೊಂಡಂತೆ ಕಿತ್ತಾಡಿಕೊಂಡರು. ನಾಲಗೆಗಂತೂ ಲಂಗು-ಲಗಾಮು ಇರಲಿಲ್ಲ. ಎಲ್ಲರೂ ಆಣೆ-ಪ್ರಮಾಣ ಹಾಕಿದರು. ಅವನ್ನೆಲ್ಲ ಪತ್ರಿಕೆಗಳು ಬರೆದಿದ್ದೇ ಬರೆದಿದ್ದು. ಪ್ರತಿದಿನ ಆ ಸುದ್ದಿಯನ್ನೆಲ್ಲ ಪ್ರಕಟಿಸಿದ್ದೇ ಪ್ರಕಟಿಸಿದ್ದು. ಕೊನೆಗೆ ಏನಾಯಿತು? ಹಾಗೆ ಕಿತ್ತಾಡಿಕೊಂಡವರೆ ಒಂದಾಗಿ ಸರಕಾರ ರಚಿಸಿದರು. ಅಂದರೆ ರಾಜಕಾರಣಿಗಳ ಮಾತಿಗಂತೂ ಕಿಮ್ಮತ್ತಿಲ್ಲ ಎಂದಂತಾಯಿತು. ಆದರೆ ಪತ್ರಕರ್ತರು ಮಾಡಿದ ವರದಿಗಳಿಗೆ ಏನು ಮರ್ಯಾದೆ ಉಳಿಯಿತು. ‘ರಾಜಕಾರಣಿಗಳು ಹೇಳಿದ್ದನ್ನು ವರದಿ ಮಾಡಿದ್ದೇವೆ, ಇದರಲ್ಲಿ ನಮ್ಮ ತಪ್ಪೇನು ಬಂತು?’ ಪತ್ರಕರ್ತರು ಸಮರ್ಥಿಸಿಕೊಂಡರೆ, ರಾಜಕಾರಣಿಗಳೂ ‘ನಮ್ಮ ಮಾತುಗಳನ್ನು ಮುಖಪುಟದಲ್ಲಿ ಪ್ರಕಟಿಸಿ ಎಂದು ನಾವು ನಿಮಗೆ ಹೇಳಿದ್ದೇವಾ? ಅಷ್ಟಕ್ಕೂ ನೀವ್ಯಾಕೆ ಅವನ್ನು ಪ್ರಕಟಿಸಿದ್ದು?’ ಎಂದು ಕೇಳಬಹುದಲ್ಲ. ಆಗಲೂ ನಿರುತ್ತರರಾಗುವವರು ಪತ್ರಕರ್ತರೇ.

ರಾಜಕಾರಣಿಗಳನ್ನು ಸಂದರ್ಶಿಸುವುದು, ಅವರ ಪತ್ರಿಕಾಗೋಷ್ಠಿಗೆ ಹಾಜರಾಗುವುದು, ಅವರ ಕಾರ್ಯಕ್ರಮಗಳ ಸುದ್ದಿ ಬರೆಯುವುದು ಬಹಳ ಸುಲಭ. ಅದಕ್ಕೆ ಯಾವುದೇ ಮಹಾ ಬುದ್ಧಿಮತ್ತೆ ಬೇಕಿಲ್ಲ. ಯಾರಾದರೂ ಬರೆಯಬಹುದು. ಕಾರಣ ಬಹುತೇಕ ರಾಜಕಾರಣಿಗಳು ಹೆಚ್ಚು ಓದಿದವರಲ್ಲ. ಅವರು ಹೇಳಿದ್ದನ್ನು ಅರ್ಥಮಾಡಿಕೊಳ್ಳಲು ಅತೀಜ್ಞಾನವೂ ಬೇಕಿಲ್ಲ. ಮಂತ್ರಿಯೊಬ್ಬ ಗುಲ್ಬರ್ಗಕ್ಕೆ ಹೋದರೆ, ಅಲ್ಲಿನ ಪತ್ರಕರ್ತರು ಬೆಳಗಿನ ಜಾವವೇ ರೈಲು ನಿಲ್ದಾಣಕ್ಕೆ ಬಂದಿರುತ್ತಾರೆ. ಅದೇ ಆ ಊರಿಗೆ ಒಬ್ಬ ಅಣು ವಿಜ್ಞಾನಿ, ಕೃಷಿ ವಿಜ್ಞಾನಿ, ಆರ್ಥಿಕತಜ್ಞ ಬಂದರೆ, ಯಾರೂ ಬರುವುದಿಲ್ಲ. ಕೆಲವೊಮ್ಮೆ ಪತ್ರಕರ್ತರಿಗೆ ಗೊತ್ತೂ ಆಗುವುದಿಲ್ಲ. ಕಾರಣ ಇವರ ಜತೆ ಮಾತಾಡಲು ಸ್ಟಫ್ ಬೇಕಾಗುತ್ತದೆ. ಓದಿಕೊಂಡಿರಬೇಕಾಗುತ್ತದೆ. ಅದೇ ಕುಮಾರಸ್ವಾಮಿ, ಯಡಿಯೂರಪ್ಪ, ಪರಮೇಶ್ವರರ ಜತೆ ಯಾರಾದರೂ ಮಾತಾಡಬಹುದು. ನೀವು ಪತ್ರಕರ್ತರೆಂಬುದು ಗೊತ್ತಾದರೆ, ಅವರೂ ಧಾರಾಳವಾಗಿ ಮಾತಾಡುತ್ತಾರೆ, ಪುಕ್ಕಟೆ ಪ್ರಚಾರ ಯಾರಿಗೆ ಬೇಡ?

ಪರಿಸರ ಮಾಲಿನ್ಯ, ಜೀವ ವಿಜ್ಞಾನ ಹಾಗೂ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ನಮ್ಮ ಮಧ್ಯೆ ಪರಿಣತರಿದ್ದಾರೆ. ವಿಷಯತಜ್ಞರಿದ್ದಾರೆ. ಆದರೆ ಅವರ್ಯಾರೂ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ,. ಪತ್ರಕರ್ತರ್ಯಾರೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, (ಐಐಎಸ್‌ಸಿ) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)ಮುಂತಾದ ಪರಿಣತರೇ ಇರುವ ಸಂಸ್ಥೆಗಳತ್ತ ಸುಳಿಯುವುದಿಲ್ಲ. ವಿಧಾನಸೌಧದಲ್ಲಿ ಪ್ರತಿದಿನ ಮಧ್ಯಾಹ್ನ ಎಲ್ಲ ಪತ್ರಿಕೆಗಳ, ಟಿವಿ ಚಾನೆಲ್ ವರದಿಗಾರರು ‘ರೌಂಡ್‌ಸ್’ ಹೋಗುತ್ತಾರೆ. ತಮ್ಮ ಕಚೇರಿಯಲ್ಲಿ ಯಾವುದೇ ಮಂತ್ರಿಯಿರಲಿ, ಸುದ್ದಿಗಾಗಿ ಪ್ರತಿದಿನ ಎರಡು-ಮೂರು ಮಂತ್ರಿಗಳಾದರೂ ಸಿಗುತ್ತಾರೆ. ಅವರೊಂದಿಗೆ ಮಾತಾಡಿ ಸುದ್ದಿ ತರುತ್ತಾರೆ.

ಎಲ್ಲ ಪತ್ರಿಕೆಗಳಲ್ಲೂ ಈ ‘ರೌಂಡ್ಸ್’ಗಾಗಿ ಒಬ್ಬ ವರದಿಗಾರನನ್ನು ನಿಯೋಜಿಸಿರುತ್ತಾರೆ. ಆದರೆ ಈ ರೌಂಡ್ಸ್ ಪದ್ಧತಿ ಐಐಎಸ್‌ಸಿ, ಐಐಎಂ ಗಳಿಗೂ ವಿಸ್ತರಿಸಬಹುದಲ್ಲ? ಪ್ರತಿದಿನ ಬೇಡ, ತಿಂಗಳಿಗೆ ಒಂದು ಸಲವಾದರೂ ಇಂಥ ಪ್ರಮುಖ ಸಂಸ್ಥೆಗಳಿಗೆ ಎಲ್ಲ ವರದಿಗಾರರು ‘ರೌಂಡ್ಸ್’ ಹೋಗಬಹುದಲ್ಲ? ಅಸಲಿ ಪ್ರಶ್ನೆಯೆಂದರೆ, ಅಲ್ಲಿಗೆ ರೌಂಡ್ಸ್ ಹೋಗಲು ವರದಿಗಾರರು ಸಿಗುತ್ತಾರಾ? ತಾವೇ ಗುಂಪುಕಟ್ಟಿಕೊಂಡು ಹೀಗೆ ‘ರೌಂಡ್ಸ್’ ಹೋಗಬೇಕೆಂದು ಎಷ್ಟು ವರದಿಗಾರರಿಗೆ ಸಂಪಾದಕರೇಕೆ ಈ ನಿಟ್ಟಿನಲ್ಲಿ ಸುಮ್ಮನಿದ್ದಾರೆ?

ಇವೆಲ್ಲವುಗಳ ಪರಿಣಾಮಗಳಿಂದ, ಈಗಿನ ಯುವಜನತೆಗೆ ಪತ್ರಿಕೆಗಳು ಬೋರ್ ಎನಿಸಿರಬೇಕು. ರಾಜಕೀಯ ಸುದ್ದಿ ಅರ್ಥಹೀನ ಎಂದೆನಿಸಿರಬೇಕು, ಪತ್ರಿಕೆಗಳು ತಮಗೆ ಬೇಕಾಗಿದ್ದನ್ನು ನೀಡುತ್ತಿಲ್ಲ ಎಂದೆನಿಸಿರಬೇಕು ಅಥವಾ ಅವರಿಗೆ ಬೇಕಾಗುತ್ತಿರುವುದು ಬೇರೆಲ್ಲೋ ಸಿಗುತ್ತಿರಬೇಕು, ರಾಜಕೀಯ ಅವರ ಆದ್ಯತೆ ಇಲ್ಲದಿರಬೇಕು… ಹೀಗಾಗಿ ಅವರು ಪತ್ರಿಕೆ ಹಾಗೂ ನ್ಯೂಸ್ ಚಾನೆಲ್‌ಗಳಿಂದ ದೂರ ಉಳಿದಿರಬೇಕು. ಇಲ್ಲದಿದ್ದರೆ ಪತ್ರಿಕೆ ಮುಖಪುಟದ ಹೆಡ್‌ಲೈನ್‌ಗಳಿಂದ, ಚಾನೆಲ್‌ಗಳ ಬಿತ್ತರಿಸುವ ಮುಖ್ಯಾಂಶಗಳಿಂದ ಅವರಿಗೆ ನೂತನ ಮುಖ್ಯಮಂತ್ರಿ ಯಾರೆಂಬುದು ಗೊತ್ತಾಗದೇ  ಇದು ನಮಗೆ ಅಂದರೆ ಪತ್ರಕರ್ತರಿಗೆ ಪಾಠವಾಗಬೇಕು, ಎಚ್ಚರಿಕೆ ಗಂಟೆ ಆಗಬೇಕು!

Leave a Reply

Your email address will not be published. Required fields are marked *

twelve + 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top