ಕ್ರೈಂ ಸ್ಟೋರಿಯಲ್ಲಿ ಹುಡುಗಿಯರ ಚಾಪ್ಟರ್..!

Posted In : ಸಿನಿಮಾ ಸಮಾಚಾರ

ಭೂಗತ ಪುಟಗಳಲ್ಲಿ ಹುಡುಗಿಯರಿದ್ದಾರೆ ಎಚ್ಚರಿಕೆ.. ಎಂಬ ಅಡಿಬರಹ ಹೊತ್ತ, ತನ್ನ ಟೈಟಲ್, ಟ್ರೇಲರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಮೂಡಿಸಿದ್ದ ಎಂಎಂಸಿಹೆಚ್ ಚಿತ್ರ ಈ ವಾರತೆರೆಗೆ ಬಂದಿದೆ.

ಕಾಲೇಜು ರಜಾದಿನಗಳಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗಿರುವ ನಾಲ್ವರು ಹುಡುಗಿಯರು ಕಾನ್ಫಿರೆನ್‌ಸ್ ಕಾಲ್‌ನಲ್ಲಿ ಹರಟೆ ಹೊಡೆಯುತ್ತಿರುತ್ತಾರೆ. ಅದೇ ವೇಳೆ ಬೆಂಗಳೂರಿನ ಏರಿಯಾವೊಂದರ ಕಸದ ತೊಟ್ಟಿಯಲ್ಲಿ ಕೊಳೆತ ಸ್ಥಿತಿಯ ಅಪರಿಚಿತ ಶವವೊಂದು ಸಿಗುತ್ತದೆ. ಆ ಶವ ಯಾರದ್ದು..? ಅದನ್ನು ಪತ್ತೆ ಮಾಡುವುದು ಹೇಗೆ ಎನ್ನುತ್ತಲೆ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಒಂದೆಡೆ ನಾಲ್ವರು ಹುಡುಗಿಯರು ಅವರ ಮೋಜು, ಮಸ್ತಿಯ ಮೇಲೆ ಚಿತ್ರದ ಕಥೆ ಸಾಗಿದರೆ, ಮತ್ತೊಂದೆಡೆ ಅಪರಿಚಿತ ಶವದ ಪತ್ತೆ, ಪೊಲೀಸ್ ತನಿಖೆಯ ಸುತ್ತ ಕಥೆ ಸಾಗುತ್ತದೆ. ಮಧ್ಯಂತರದ ಹೊತ್ತಿಗೆ ನಾಲ್ವರು ಹುಡುಗಿಯರನ್ನು ಪೊಲೀಸರು ಕೋಳಾ ತೊಡಿಸಿ ಸ್ಟೇಷನ್‌ಗೆ ಕರೆತಂದು ನಿಲ್ಲಿಸುತ್ತಾರೆ. ಅಲ್ಲಿಂದ ಮುಂದೇನಾಗುತ್ತದೆ ಎಂಬುದೇ ಎಂಎಂಸಿಹೆಚ್ ಸಿನಿಮಾದ ಕ್ಲೈಮ್ಯಾಕ್‌ಸ್.

ಚಿತ್ರದ ಅಡಿಬರಹವೇ ಹೇಳುವಂತೆ ಎಂಎಂಸಿಹೆಚ್ ಮೇಘಾ (ಎಂ), ಮಾಲಾ (ಎಂ), ಛಾಯಾ (ಸಿ), ಹರ್ಷಿತಾ ಎಂಬ ನಾಲ್ವರು ಆಪ್ತ ಗೆಳತಿಯರ ಕ್ರೈಂ ಕಹಾನಿ. ಮಂಗಳೂರು (ಎಂ), ಮೈಸೂರು (ಎಂ), ಚಾಮರಾಜನಗರ (ಸಿ), ಹಾಸನ (ಹೆಚ್)ದಿಂದ ಬೆಂಗಳೂರಿಗೆ ಬರುವ ಈ ನಾಲ್ವರು ಹುಡುಗಿಯರು ಒಂದೇ ಕಾಲೇಜ್, ಒಂದೇ ಕ್ಲಾಸಿನಲ್ಲಿ, ಒಂದೇ ಹಾಸ್ಟೆಲ್ ರೂಮ್‌ನಲ್ಲಿ ಸದಾ ಜೊತೆಯಾಗಿರುತ್ತಾರೆ. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಪ್ತರಾಗುವ ಈ ಹುಡುಗಿಯರು ಕಾಲೇಜು ದಿನಗಳನ್ನು ಖುಷಿಯಿಂದ ಕಳೆಯುತ್ತಿರುತ್ತಾರೆ. ಹೀಗಿರುವಾಗಲೇ ನಡೆಯುವ ಅನಿರೀಕ್ಷಿತ ಘಟನೆಯೊಂದರಲ್ಲಿ ನಾಲ್ವರು ಸೇರಿ ಕೊಲೆಯೊಂದಕ್ಕೆ ಕಾರಣವಾಗುತ್ತಾರೆ. ಸಂತೋಷವಾಗಿ ಕಾಲೇಜ್ ಕ್ಯಾಂಪಸ್, ಹಾಸ್ಟೆಲ್ ಓಡಾಟಿಕೊಂಡಿದ್ದ ಈ ಹುಡುಗಿಯರು ಏಕೆ ಕೊಲೆ ಮಾಡಿದರು..? ಹೇಗೆ ಕೊಲೆ ಮಾಡಿದರು..? ಇವರಿಂದ ಕೊಲೆಯಾದವರು ಯಾರು..? ಎಂಬುದೇ ಎಂಎಂಸಿಹೆಚ್ ಚಿತ್ರದ ತಿರುಳು.

ಚಿತ್ರದ ಕಥೆಯ ಒಂದು ಎಳೆ ಮೇಘಾ (ಮೇಘನಾ ರಾಜ್), ಮಾಲಾ (ಪ್ರಥಮಾ ಪ್ರಸಾದ್), ಛಾಯಾ (ಸಂಯುಕ್ತ ಹೊರನಾಡ್), ಹರ್ಷಿತಾ (ದೀಪ್ತಿ) ನಾಲ್ಕು ಪ್ರಮುಖ ಪಾತ್ರಗಳ ಸುತ್ತ ನಡೆದರೆ, ಮತ್ತೊಂದು ಎಳೆ ಅಪರಿಚಿತ ವ್ಯಕ್ತಿ ಶವ ಗುರುತಿಸುವ, ನಿಗೂಢ ಕೊಲೆಯ ಸಂಚನ್ನು ಭೇದಿಸುವ ಪೊಲೀಸ್ ಅಧಿಕಾರಿ ಝಾನ್ಸಿ ದ್ವಿವೇದಿ) ಸುತ್ತ ನಡೆಯುತ್ತದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಐವರು ನಟಿಯರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಇತರೆ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಮನಸಿನಲ್ಲಿ ಉಳಿಯುವುದಿಲ್ಲ.

ಮಧ್ಯಂತರದ ನಂತರ ಚಿತ್ರದ ನಿರೂಪಣೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಒಂದು ಕೊಲೆಯ ಹಿಂದೆ ಅಡಗಿರುವ ಸಂಗತಿಗಳು, ತಿರುವುಗಳನ್ನು ಪಡೆದುಕೊಂಡು ತೆರೆದುಕೊಳ್ಳುತ್ತ ಹೋಗುತ್ತದೆ. ಅಂತಿಮವಾಗಿ ಎಲ್ಲಾ ಕಾತುರ, ಕುತೂಹಲಕ್ಕೆ ಕ್ಲೈಮ್ಯಾಕ್‌ಸ್ನಲ್ಲಿ ಫುಲ್‌ಸ್ಟಾಪ್ ಬೀಳುತ್ತದೆ.

ಎಂಎಂಸಿಹೆಚ್ ಚಿತ್ರದ ಕಥೆ ಚಿತ್ರಕಥೆ ಮತ್ತು ನಿರೂಪಣೆ ಅಲ್ಲಲ್ಲಿ ನಿಧಾನಗತಿಯಲ್ಲಿ ಸಾಗುತ್ತದೆ. ಚಿತ್ರದ ಕೊನೆಗೆ ಇಂಥದ್ದೊಂದು ಕಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವ ಸಾಕಷ್ಟು ಅವಕಾಶಗಳನ್ನು ನಿರ್ದೇಶಕರು ಮಿಸ್ ಮಾಡಿಕೊಂಡಂತೆ ಅನಿಸುತ್ತದೆ. ಸಿದ್ಧಸೂತ್ರಕ್ಕೆ ಕಟ್ಟುಬಿದ್ದು ಕೆಲವು ಕಡೆಗಳಲ್ಲಿ ಅನಗತ್ಯ ಫೈಟಿಂಗ್, ಹಾಡುಗಳನ್ನು ತೂರಿಸಿದಂತೆ ಭಾಸವಾಗುತ್ತದೆ. ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ, ಎಂಎಂಸಿಹೆಚ್ ಒಂದೊಳ್ಳೆ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿನ ಹುಡುಗಿಯರ ಮನಸ್ಥಿತಿ, ಸಾಮಾಜಿಕ ಬದಲಾವಣೆ ಎಲ್ಲವನ್ನೂ ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ.

ಬೆಲೆಗೆ ಸಿಗುತ್ತದೆ ಎಂದು ಪರಭಾಷಾ ಸಿನಿಮಾಗಳ ರಿಮೇಕ್ ರೈಟ್‌ಸ್ ತಂದು ಅದಕ್ಕೆ ಇಲ್ಲಿ ಒಗ್ಗರಣೆ ಹಾಕಿ, ತಮ್ಮದೇ ಚಿತ್ರ ಎಂಬ ಚಿತ್ರಾನ್ನ ಮಾಡಿ ಉಣಬಡಿಸಿ ಬೀಗುವ ನಿರ್ದೇಶಕರಿಗಿಂತ, ಸ್ವಂತ ಕಥೆಯೊಂದನ್ನು ತಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದಿಟ್ಟಿರುವ ನಿರ್ದೇಶಕ ಮುಸ್ಸಂಜೆ ಮಹೇಶ್ ಪ್ರಯತ್ನ ಪ್ರಶಂಸಾರ್ಹ.

ಉಳಿದಂತೆ ಛಾಯಾಗ್ರಹಣ, ಸಂಕಲನ ಕಾರ್ಯ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ. ವಿ. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನದ ಒಂದೆರಡು ಹಾಡುಗಳು ಕಿವಿಗೆ ಇಂಪು ಒಂದೇ ತರದ ಸಿನಿಮಾಗಳನ್ನು ನೋಡಿ ಬೋರಾಗಿದೆ ಎನ್ನುವವರು ವಾರಾಂತ್ಯದಲ್ಲಿ ಒಮ್ಮೆ ಎಂಎಂಸಿಹೆಚ್ ಎಂಬ ಹುಡುಗಿಯರ ಕ್ರೈಂಕಹಾನಿಯನ್ನು ನೋಡಿಬರಲು ಅಡ್ಡಿಯಿಲ್ಲ.

Leave a Reply

Your email address will not be published. Required fields are marked *

18 + one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top