ಹತ್ತು ಪುತ್ರರನ್ನು ಹೆತ್ತ ನಂತರ ಪತಿಯು ಹನ್ನೊಂದನೆಯ ಪುತ್ರ!

Posted In : ಕ್ಷಣಹೊತ್ತು ಅಣಿ ಮುತ್ತು

ಮೇಲಿನ ಮಾತುಗಳು ವಿಚಿತ್ರವೆನಿಸುತ್ತವೆಯೇ? ಹಾಗೆಂದುಕೊಳ್ಳಬೇಡಿ! ಹಿಂದಿನ ಕಾಲದಲ್ಲಿ, ಶುಭ ಸಂದರ್ಭದಲ್ಲಿ ಮದು ಮಗಳಿಗೆ ದಶಾಸ್ಯಾಂ ಪುತ್ರಾನ್ ಅಧೇಹೀ, ಪತಿಂ ಏಕಾದಶಂ ಕೃಧಿ ಎಂದು ಆಶೀರ್ವದಿಸುತ್ತಿದ್ದರಂತೆ. ಈ ಆಶೀರ್ವಾದಕ್ಕೆ ಮದುವೆಯಾಗಿ ಹತ್ತು ಮಕ್ಕಳನ್ನು ಹೆತ್ತು ಸುಖವಾಗಿರು, ಹಾಗೆಯೇ ನಿನ್ನ ಪತಿಯನ್ನು ಹನ್ನೊಂದನೇ ಮಗುವನ್ನಾಗಿ ಮಾಡಿಕೋ ಎಂಬ ಅರ್ಥವಂತೆ! ಈ ಮಾತುಗಳನ್ನು ನಿಜವಾಗಿಸಿದ ಮಹಾತ್ಮ ಗಾಂಧೀಜಿಯವರ ನಿಜಜೀವನದ ಘಟನೆಯೊಂದು ಇಲ್ಲಿದೆ.

ಒಮ್ಮೆ ಮಹಾತ್ಮ ಗಾಂಧೀಜಿಯವರು ವಿದೇಶವೊಂದಕ್ಕೆ ಪ್ರವಾಸ ಹೋಗಿದ್ದ ರಂತೆ. ಆ ದೇಶದ ಹಲವಾರು ನಗರಗಳಲ್ಲಿ ಮಹಾತ್ಮರ ಉಪನ್ಯಾಸಗಳು ಏರ್ಪಾ ಡಾಗಿತ್ತು. ಮಹಾತ್ಮರ ಸಂಗಡ ಕಸ್ತೂರ್ಬಾ ಇದ್ದರು. ಒಂದೂರಿನಲ್ಲಿ ಗಾಂಧೀಜಿ ಯವರ ಉಪನ್ಯಾಸ ಆರಂಭವಾಗುವುದಕ್ಕೆ ಮುಂಚೆ ಕಾರ್ಯಕ್ರಮದ ನಿರೂಪಕರು ಗಾಂಧೀಜಿಯವರ ಪರಿಚಯ ಮಾಡಿ ಕೊಡಲು ಎದ್ದು ನಿಂತರು.

ಗಾಂಧೀಜಿಯವರ ವಿದ್ಯಾಭ್ಯಾಸ, ವಕೀಲವೃತ್ತಿ, ದಕ್ಷಿಣ ಆಫ್ರಿಕಾದಲ್ಲಿಯ ಸತ್ಯಾಗ್ರಹ ಚಳವಳಿಯ ನೇತೃತ್ವ ಮುಂತಾದವುಗಳ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಆದರೆ ಕಸ್ತೂರ್ಬಾ ಗಾಂಧಿಯವರೂ ಮಹಾತ್ಮ ಗಾಂಧೀಜಿಯವರೊಟ್ಟಿಗೆ ಬಂದಿದ್ದಾರೆ ಎಂದು ಹೇಳುವುದನ್ನು ಮರೆತು ಬಿಟ್ಟರು. ಆಗ ಗಾಂಧೀಜಿಯವರ ಕಾರ್ಯದರ್ಶಿಯವರು ಎದ್ದು ನಿರೂಪಕರ ಬಳಿ ಹೋಗಿ ಅವರ ಕಿವಿಯಲ್ಲಿ ಕಸ್ತೂರ್ಬಾ ಗಾಂಧಿಯವರು ಬಂದಿದ್ದಾರೆ ಎಂಬುದನ್ನು ಹೇಳಿ ಪಿಸುಗುಟ್ಟಿದರು.

ಆ ವಿದೇಶಿ ನಿರೂಪಕನಿಗೆ ಕಸ್ತೂರ್ಬಾ ಎಂಬ ಪದದಲ್ಲಿ ಬಾ ಎಂಬ ಶಬ್ದದ ಅರ್ಥ ಗೊತ್ತಿರಲಿಲ್ಲ. ಬಾ ಎಂದರೇನು? ಎಂದು ಆತ ಪಿಸುಮಾತಿನಲ್ಲೇ ಕೇಳಿದ. ಕಾರ್ಯದರ್ಶಿಯವರು ಗುಜರಾತಿ ಭಾಷೆಯಲ್ಲಿ ‘ಬಾ’ ಎಂದರೆ ತಾಯಿ ಎಂದು ಅರ್ಥ ಎಂದರು. ತಕ್ಷಣ ನಿರೂಪಕರು ಸಭೆಯನ್ನುದ್ದೇಶಿಸಿ ಮಹಾತ್ಮ ಗಾಂಧೀಜಿಯವರ ಸಂಗಡ ಅವರ ತಾಯಿಯವರಾದ ಕಸ್ತೂರ್ಬಾ ಗಾಂಧಿಯವರೂ ಬಂದಿದ್ದಾರೆ, ಅವರಿಗೂ ಸುಸ್ವಾಗತ ಎಂದು ಬಿಟ್ಟರು. ನಿರೂಪಕರು ಮಾಡಿದ ತಪ್ಪನ್ನು ಅರ್ಥ ಮಾಡಿಕೊಂಡ ಸಭಿಕರೆಲ್ಲಾ

ಗೊಳ್ಳೆಂದು ನಕ್ಕರು. ಸಂಗಡ ಬಂದಿದ್ದವರಿಗೆಲ್ಲಾ ಮುಜುಗರ ಉಂಟಾಯಿತು. ಕಾರ್ಯದರ್ಶಿಯವರಿಗೆ ಕಸಿವಿಸಿಯುಂಟಾಯಿತು.
ಎಲ್ಲರೂ ಬೇಸರಿಸಿಕೊಂಡರು. ಆದರೆ ಗಾಂಧೀಜಿಯವರು ಮಾತ್ರ ಬೇಸರಿಸಿಕೊಳ್ಳಲಿಲ್ಲ. ನಗುನಗುತ್ತಲೇ ತಮ್ಮ ಉಪನ್ಯಾಸ ಆರಂಭಿಸಿದರು. ನಿರೂಪಕರು ಕಸ್ತೂರ್ಬಾ ಗಾಂಧಿಯವರನ್ನು ನನ್ನ ತಾಯಿ ಎಂದು ಪರಿಚಯ ಮಾಡಿ ಕೊಟ್ಟಿದ್ದಕ್ಕೆ ನೀವೆಲ್ಲಾ ನಕ್ಕು ಬಿಟ್ಟಿರಿ, ಆದರೆ ಅವರದ್ದೇನೂ ತಪ್ಪಿಲ್ಲ. ನನಗೂ ಕಸ್ತೂರ್ಬಾ ಅವರಿಗೂ ಮದುವೆಯಾಗಿ ಎಷ್ಟೋ ದಶಕಗಳಾಗಿವೆ. ಆಕೆ ಮೊದಲು ನನ್ನ ಹೆಂಡತಿಯಾಗಿದ್ದರು. ಆನಂತರ ನಮ್ಮ ಮಕ್ಕಳ ತಾಯಿಯಾದರು. ಈಗ ಕಳೆದ ಒಂದೆರಡು ದಶಕಗಳಿಂದ ತಾಯಿ ತನ್ನ ಮಗುವಿನ ಮೇಲೆ ಸುರಿಸುವ ಪ್ರೇಮವನ್ನು ನನ್ನ ಮೇಲೆ ಸುರಿಸುತ್ತಿದ್ದಾರೆ. ನನ್ನನ್ನು ಒಬ್ಬ ತಾಯಿಯಂತೆಯೇ ಸಾಕು ತ್ತಿದ್ದಾರೆ. ಹಾಗಾಗಿ ನಿರೂಪಕರು ಕಸ್ತೂರ್ಬಾರವರನ್ನು ನನ್ನ ತಾಯಿ ಎಂದು ಕರೆದುದರಲ್ಲಿ ತಪ್ಪೇನು ಇಲ್ಲ ಎಂದಾಗ, ಸಭಿಕರು ತಟ್ಟಿದ ಚಪ್ಪಾಳೆಯ ಸದ್ದು ಮುಗಿಲಿಗೇರಿತ್ತು!

ಆನಂತರ ಗಾಂಧೀಜಿಯವರು ಸತ್ಯಾಗ್ರಹ, ಬ್ರಿಟೀಷರ ದಬ್ಬಾಳಿಕೆ, ಸ್ವಾತಂತ್ರ ಚಳುವಳಿ ಇವುಗಳ ಬಗ್ಗೆ ಒಂದು ಗಂಟೆಗಳ ಕಾಲ ಮಾತನಾಡಿದರು. ಆದರೆ ಆ ಮಾತುಗಳು ಯಾವುವೂ ಜನರ ನೆನಪಿನಲ್ಲಿ ಉಳಿಯಲಿಲ್ಲ. ಕಸ್ತೂರ್ಬಾ ನನ್ನ ಹೆಂಡತಿಯಾಗಿದ್ದಳು. ಆದರೆ ಈಗ ನನ್ನನ್ನು ತಾಯಿಯಂತೆ ನೋಡಿಕೊಳ್ಳುತ್ತಾರೆ ಎಂಬ ಗಾಂಧೀಜಿಯವರ ಮಾತುಗಳು ಮಾತ್ರ ಅವರ ನೆನಪಿನಲ್ಲಿ ಉಳಿದು ಹೋದವು!

ಈ ಆಶೀರ್ವಾದದ ಮಾತುಗಳ ಅರ್ಥವನ್ನು ಮಹಾತ್ಮ ಗಾಂಧಿ ದಂಪತಿಗಳು ಅರ್ಥಪೂರ್ಣವಾಗಿ ಆಚರಣೆಗೆ ತಂದು ತೋರಿ ಸಿದ್ದರು! ಈ ಆಶೀರ್ವಾದವು ಹತ್ತು ಮಕ್ಕಳನ್ನು ಹೆರುತ್ತಿದ್ದ ಕಾಲಕ್ಕೂ ಅನ್ವಯವಾಗುತ್ತದೆ! ಒಂದೋ ಎರಡೋ ಮಕ್ಕಳು ಸಾಕು ಎನ್ನುವ ಈ ಕಾಲಕ್ಕೂ ಅನ್ವಯವಾಗುತ್ತದೆ ಅಲ್ಲವೇ?

Leave a Reply

Your email address will not be published. Required fields are marked *

13 − nine =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top