ಚುನಾವಣೆಗಳೆಂದರೆ ಊರ ಹಬ್ಬದಂತಿದ್ದವು!

Posted In : ಸಂಗಮ, ಸಂಪುಟ

ಹಿನ್ನೋಟ: ಕುಮಾರಸ್ವಾಮಿ ವಿರಕ್ತಮಠ

ದಿನ ಕಳೆದಂತೆ ಇನ್ನೇನು ರಾಜ್ಯ ವಿಧಾನಸಭೆಯ ಚುನಾವಣೆ ಹತ್ತಿರವಾಗುತ್ತಿದೆ. ಪಕ್ಷದ ಮುಖಂಡರುಗಳು ಕಾಲಿಗೆ ಚಕ್ರ ಕಟ್ಟಿ ಕೊಂಡವರಂತೆ ಇಡೀ ರಾಜ್ಯ ವನ್ನು ಸುತ್ತುತ್ತಿದ್ದಾರೆ. ನಮ್ಮ ರಾಜಕಾರಣಿಗಳು ಹೇಗೆ ಎಂದರೆ ಐದು ವರ್ಷ ಗಳಿಗೊಮ್ಮೆ ನಮ್ಮ ರಾಜ್ಯದ ಸಂಪೂರ್ಣ ಪ್ರವಾಸ ಮಾಡುವುದು ಪರಂಪರಾ ಗತವಾಗಿ ರೂಢಿ ಇರಬಹುದು ಎಂದು ಜನ ನಂಬುವಷ್ಟರ ಮಟ್ಟಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇವರು ಇದ್ದಕ್ಕಿದ್ದಂತೆ ಯಾವ ಪರಿ ಆಕ್ಟೀವ್ ಆಗಿದ್ದಾ ರೆಂದರೆ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸುವಷ್ಟರಲ್ಲೇ ಮಾಡಬೇಕಾದ ಕೆಲಸಗಳನ್ನೆಲ್ಲ ಮಾಡಿ ಮುಗಿಸಿಬಿಡಬೇಕು ಎಂದು ಮಾಡುತ್ತಿ ರುವಂತಿದೆ.

ಚುನಾವಣೆ ಪ್ರತಿ ವರ್ಷವೂ ನಡೆಯುವಂಥದ್ದೇ. ಆದರೆ ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ವ್ಯತ್ಯಾಸ ಇದ್ದೇ ಇದೆ. ಹಿಂದಿನ ಚುನಾವಣೆಗಳಿಗೂ ಈಗಿನ ಚುನಾವಣೆಗಳಿಗೂ ಸಾಮ್ಯವಿಲ್ಲ. ಹಿಂದೆ ಚುನಾವಣೆ ಘೋಷಣೆಯಾದರೆ ಸಾಕು ಅವುಗಳನ್ನು ನಮ್ಮೂರ ಕಡೆಗಳೆಲೆಲ್ಲ ಆಚರಿಸುತ್ತಿದ್ದರು. ಏನೋ ಒಂದು ಸಂಭ್ರಮ, ಹೊಸತನಕ್ಕೆ ರಹದಾರಿ ಎನಿಸುತ್ತಿತ್ತು. ಊರಿಗೆ ಊರೇ ಪೈಪೋಟಿ ಬೀಳುತ್ತಿತ್ತು, ಊರ ಅಗಸಿಯ ನಡುವೆ ಅಭ್ಯರ್ಥಿಗಳ ಎತ್ತರೆತ್ತರದ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ರಾತ್ರಿ ಹೊತ್ತು ಕೂಡ ಅಂದವಾಗಿ ಕಾಣಲಿ ಎಂದು ಲೈಟಿನ ಅಲಂಕಾರ ಬೇರೆ ಮಾಡುತ್ತಿದ್ದರು. ಪಕ್ಷದ ಚಿಹ್ನೆಯುಳ್ಳ ಪರಿಪರಿ ಪ್ಲಾಸ್ಟಿಕ್ಕಿನ ಸರಗಳೇ ಹಬ್ಬದ ತಳಿರು ತೋರಣಗಳು, ಟ್ರ್ಯಾಕ್ಟರ್ ಟ್ರೇಲರ್‌ಗಳೇ ನಾಯಕರ ಮಾತಿನ ವೇದಿಕೆಗಳು, ಊರ ಶಿಬಾರದ ಬಾಗಿಲಿ ನಿಂದ ಅಭ್ಯರ್ಥಿಯ ಡೊಳ್ಳಿನ ಮೆರವಣಿಗೆ, ಪ್ರಚಾರ ಕಾರ್ಯದ ಊರ ಮುಖಂಡನ ಮನೆಯಲ್ಲಿ ಒಂದಿಷ್ಟು ಉಪ್ಪಿಟ್ಟು ಚಹಾದ ವ್ಯವಸ್ಥೆ, ಮೂರು ಗಾಲಿಯ ಗೂಡ್ಸ್ ಆಟೋಗಳೇ ಅಂದಿನ ಹೈಟೆಕ್ ಪ್ರಚಾರದ ವಾಹನಗಳು.

ಇದನ್ನೆಲ್ಲ ರಸ್ತೆ ಬದಲಿಯಲ್ಲಿ ನಿಂತು ‘ಈ ವ್ಯಕ್ತಿ ಗೆದ್ದರೆ ನಮ್ಮ ಊರಿಗೆ ಕರೆಂಟ್ ಬರುತ್ತದಾ? ನೀರು ಸಿಗುತ್ತದಾ?’ಎಂದು ಜನ ನೋಡುತ್ತಾ ನಿಲ್ಲುತ್ತಿದ್ದರು. ಬಾಲ್ಯದಲ್ಲಿ ಈ ವಾಹನಗಳ ಹಿಂದೆ ಓಡುತ್ತ, ಅವರು ಕೊಡುವ ಟೋಪಿಗಾಗಿ, ಕೊರಳಲ್ಲಿ ಹಾಕಿ ಕೊಳ್ಳುವ ಶಲ್ಯಕ್ಕಾಗಿ ಓಡುತ್ತಿದ್ದುದು ಇನ್ನೂ ನೆನಪಿದೆ. ಅವರು ಕೊಡುತ್ತಿದ್ದ ಕರಪತ್ರಗಳನ್ನು ಸಂಜೆ ತಿನ್ನಲು ಬಳಸುತ್ತಿದ್ದೆವು. ಅದೆಲ್ಲದರಲ್ಲೂ ಏನೋ ಒಂದು ಸಂತೋಷ. ಪ್ರಚಂಡ ಬಹುಮತದಿಂದ ಇವರನ್ನು ಆರಿಸಿ ತರಬೇಕಾಗಿ ವಿನಂತಿ ಎಂದು ಊರೂರು ಸುತ್ತುತ್ತಿದ್ದ ಧ್ವನಿವರ್ಧಕಗಳ ಭರಾಟೆ ಈಗಿಲ್ಲ. ’ಕಾಕಾ, ಮಾವ, ಅತ್ತಿಗೆ, ಅವ್ವ, ಅಕ್ಕ, ತಂಗಿ, ನಿಮ್ಮ ವೋಟು ಇವರಿಗೆ ಹಾಕಬೇಕಬೆ ಯವ್ವಾ ’ಎಂದು ಹೊರಡುತ್ತಿದ್ದ ಧ್ವನಿ ಮತದಾರರಿಗೆ ಆಪ್ತವೆನಿಸುತ್ತಿತ್ತು.

ಅದರಲ್ಲೂ ಗ್ರಾಮ ಪಂಚಾಯತಿ ಎಲೆಕ್ಷನ್‌ಗಳಲ್ಲಂತೂ ಗಂಡನಿಗೆ ಹೆಂಡತಿಯೇ ಎದುರಾಳಿ, ಮಾವನಿಗೆ ಅಳಿಯನೇ ಎದುರಾಳಿ. ಆದರೆ ಅಲ್ಲಿ ಜಗಳವಿಲ್ಲ. ಸ್ಪರ್ಧೆ ಆರೋಗ್ಯಕರವಾಗಿರುತ್ತಿತ್ತು. ಕಾಗದದ ಬ್ಯಾಲೆಟ್‌ಪೇಪರ್‌ಗೆ ಇದ್ದ ಶಕ್ತಿ ಯಂತ್ರಗಳಿಗೆ ಇಲ್ಲ, ಬ್ಯಾಲೆಟ್ ಪೇಪರ್‌ಗಳ ಮೇಲೆ ಒತ್ತಿದ ವೋಟಿನಿಂದ ಗೆದ್ದ ರಾಜಕಾರಣಿಗಳಿಗೆ ಇದ್ದ ಶಕ್ತಿ ಈಗಿನ ರಾಜಕಾರಣಿಗಳಿಗಿಲ್ಲ. ಆಗೆಂದೂ ನೋಟುಗಳನ್ನು ಎಸೆದು ಮತ ಹಾಕಿಸಿಕೊಳ್ಳುತ್ತಿರಲಿಲ್ಲ. ವೋಟಿಗಾಗಿ ಕೊಲೆ ಆಗುತ್ತಿರಲಿಲ್ಲ. ಎಲೆಕ್ಷನ್ ದಿನದ ಹಿಂದೆ ಕ್ಯಾಂಡಿ ಡೇಟ್ ಮಿಸ್ ಆಗುತ್ತಿರಲಿಲ್ಲ.ಊರ ಜಾತ್ರೆಯ ತೇರನೆಳೆದು ನಿಲ್ಲಿಸಿದಂತೆ ಚುನಾವಣೆಯ ಬ್ಯಾಲೆಟ್ ಬಾಕ್ಸಗಳನ್ನು ಸೀಲ್ ಮಾಡಿಸಿ ಬರುತ್ತಿದ್ದರು. ಈಗಿನ ಹಾಗೆ ವೋಟು ಹಾಕುವುದರಲ್ಲಿಯೂ, ಎಣಿಸುವುದರಲ್ಲಿಯೂ ಭ್ರಷ್ಟಾಚಾರ ಇರಲಿಲ್ಲ.

ನಮ್ಮ ವಿರುದ್ಧ ಈ ಪಕ್ಷದವರು ಹಾಗೆ ಮಾಡುತ್ತಾರೆ, ಮಾಡುತ್ತಾರೆ, ಆದರೆ ಜನ ಇದನ್ನು ನಂಬಬಾರದು ನಮ್ಮ ಪಕ್ಷಕ್ಕೇ ವೋಟು ನೀಡಿ ಗೆಲ್ಲಿಸಬೇಕು ಎಂದು ಟಿವಿ ಚಾನೆಲ್‌ನ ಪ್ಯಾನೆಲ್ ಡಿಸ್ಕಶನ್ಸ್ ನಲ್ಲಿ ಕೂರುತ್ತಿರಲಿಲ್ಲ. ಮತದಾರರ ಬಳಿಯೇ ಬಂದು ಪ್ರಚಾರ ಮಾಡುತ್ತಿದ್ದರು. ಆದರೆ ಈಗ ಹೆಚ್ಚು ಪ್ರಚಾರ ಮಾಡುವಂತಿಲ್ಲ. ಏಕೆಂದರೆ ಚುನಾವಣಾ ಆಯೋಗದ ನಿಯಮಗಳು ಬಿಗಿ ಗೊಳ್ಳುತ್ತಿವೆ. ಕಾಲಕಳೆದಂತೆ ಪ್ರಚಾರತಂತ್ರವೂ ಬದಲಾಗಿದೆ. ಈಗೇನಿದ್ದರೂ ದಲಿತರ ಮನೆಯಲ್ಲಿ ನೀರು ಕುಡಿ, ಸ್ಲಂ ಜನರ ಜತೆ ಬಜ್ಜಿ ತಿನ್ನಿ, ಸ್ಲಂ ವಾಸ್ತವ್ಯ ಮಾಡಿ ಇಂಥವೇ! ಜತೆಗೆ ಸಾಮಾಜಿಕ ಜಾಲತಾಣಗಳನ್ನು ಬಹಳ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರಚಾರ ತಂತ್ರದಲ್ಲಿ ಪಕ್ಷಗಳು ಸಾಮಾಜಿಕ ಜಾಲತಾಣದ ವಿಭಾಗವನ್ನೇ ತೆರೆದಿವೆ.

ಅಭ್ಯರ್ಥಿಗಳು ಫೇಸ್ಬುಕ್, ಟ್ವಿಟ್ಟರ್ ಅಕೌಂಟಗಳನ್ನು ತೆರೆಯುವುದು ಕಡ್ಡಾಯ. ಅಲ್ಲದೇ, ಇಷ್ಟು ಫಾಲೋವರ್ಸಗಳನ್ನು ಹೊಂದಿ ರಬೇಕು ಎಂದು ರಾಜಕೀಯ ಪಕ್ಷಗಳು ಕಟ್ಟಾಜ್ಞೆ ಹೊರಡಿಸಿವೆ. ಮುಖಂಡರುಗಳ ಫ್ಯಾನ್ಸಕ್ಲಬ್ ಪೇಜ್‌ಗಳು, ಇವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂಬ ಪೇಜ್‌ಗಳಿಗೆನೂ ಕಮ್ಮಿ ಇಲ್ಲ. ಇಲ್ಲಿಯೇ ಪರಸ್ಪರ ಅವರ ಮೇಲೆ ಇವರು, ಇವರ ಮೇಲೆ ಅವರು ಮಾಡುವ ಟ್ರೋಲ್‌ಗಳಂತೂ ನೋಡುಗರಿಗೆ ಹೊರತು ಇವರ ಸಾಧನೆಯ ಶಿಖರವೇನೂ ಅಲ್ಲ. ಬಿಂಬಿಸಲು, ಪ್ರಚಾರಕ್ಕೆ ಹೈಟೆಕ್ ಬಸ್ಸುಗಳು,ರಥಗಳು ಸಿದ್ಧವಾಗಿವೆ. ಒಬ್ಬರದು ಸಾಧನೆ, ಇನ್ನೊಬ್ಬರದು ಪರಿವರ್ತನೆ, ಮಗದೊಬ್ಬರದು ಪರ್ವ ಇದು ಚುನಾವಣಾ ಕಣವಲ್ಲ ರಣರಂಗವೇ ಸರಿ!

ಈಗಿನ ಚುನಾವಣಾ ತಂತ್ರಗಳನ್ನು ಹೆಣೆಯಲು ಎಲೆಕ್ಷನ್ ಮಾಸ್ಟರ್ ಮೈಂಡ್‌ಗಳು ಹುಟ್ಟಿಕೊಂಡಿದ್ದಾರೆ. ಈ ಮೂಲಕ ಇದೊಂದು ವ್ಯಾಪಾರವಾಗಿಬಿಟ್ಟಿದೆ. ತಂತ್ರಗಾರಿಕೆಯ ಅಂಗಡಿಗಳು ತೆರೆದುಕೊಂಡಿವೆ. ಕಾರಣ ರಾಜಕೀಯ ನಾಯಕರ ತಲೆಗಳು ಬರಿದಾಗಿವೆ. ಇನ್ನೇನು ಕ್ಯಾಂಪೆನ್‌ಗಳಿಗೇ ರೋಬೋಟ್‌ಗಳನ್ನು ತರಿಸುವ ಕಾಲವೇನೂ ದೂರವಿಲ್ಲ. ಇವರ ಸಮಾವೇಶಗಳು ಜನ ರಿಲ್ಲದೆ ಬಣಗುಡುತ್ತಿವೆ. ಆಮಿಷಗಳ ಹಂಚಿಕೆ ಅವ್ಯಾಹತವಾಗಿದೆ. ಸುರಿದು ಜನರನ್ನು ಸೇರಿಸಲಾಗುತ್ತಿದೆ, ಪ್ರಚಾರ ವೈಖರಿಗಳು ಡಿಜಿಟಲೀಕರಣಗೊಂಡಿರಬಹುದು. ಆದರೆ ಸಾಮಾನ್ಯ ಜನರ ಜೀವನ ಇನ್ನೂ ಆಗಿನ ಬ್ಯಾಲೆಟ್ ಕಾಗದಗಳಲ್ಲೇ ಹುದುಗಿ ಹೋಗಿದೆ, ಕೈ ಹಿಡಿದು ಮೇಲೆತ್ತುವ ನಿಮ್ಮ ಮಾತುಗಳು ನಿಮ್ಮ ಹಸಿ ಹಸಿ ಹುಸಿಭಾಷಣಗಳೇ ಸೈ!

ಸಾವಿನ ಮನೆಗಳಲ್ಲಿ ಹಬ್ಬದೂಟಗಳು ಇವರದ್ದು! ಧಿಕ್ಕಾರವಿರಲಿ ನಿಮ್ಮ ಅಮಾನವೀಯತೆಗೆ. ಬಿಸಿಲಿನ ಬೇಗೆಗೆ ಹೆದರಿ ಹೈಟೆಕ್ ಎಸಿ ವಾಹಗಳಲ್ಲಿ ಪ್ರಚಾರ ನಡೆಸುವ ಇವರು ಇನ್ನು ಬಿಸಿಲಲ್ಲೇ ಬೆವರು ಹರಿಸಿ ರಕ್ತ ಬಸಿದು ದುಡಿಯುವ ರೈತರ, ಬಡವರ, ನೋವುಗಳಿಗೇ ಯಾವ ರೀತಿ ಸ್ಪಂದಿಸಿಯಾರು? ಕಾಲಿಟ್ಟರೆ ನೆಲ ಕುಳಿಹೋಗುವುದೇ ಎಂಬಂತೆ ಇವರ ಭಿನ್ನಾಣ.

ಯುವ ಮತದಾರರೇ ಹೆಚ್ಚಿರುವ ದೇಶ ನಮ್ಮದು. ಯುವ ಮನಸುಗಳು ಸಂಕಲ್ಪ ಮಾಡಿದರೆ ಬದಲಾವಣೆಯೇನೂ ಅಸಾಧ್ಯ ವಲ್ಲ, ದೇಶದ ಭವಿಷ್ಯವನ್ನು ಆಮಿಷಗಳಿಗೆ ಬಲಿಕೊಟ್ಟರೆ ಹೆತ್ತು ಹೊತ್ತು ಸಾಕಿದ ತಾಯಿಯನ್ನು ಮಾರಿದಂತೆಯೇ ಸರಿ! ಹೊಸ ದಾಗಿ ಲಕ್ಷಾಂತರ ಯುವಜನರು ಈ ಬಾರಿ ನವಮತದಾರರಾಗಲಿದ್ದಾರೆ, ಹೊಸ ಹುರುಪು ಹುಮ್ಮಸ್ಸಿನಲ್ಲಿ ನೋಂದಾವಣಿ ಮಾಡಿ ಸಿಕೊಂಡು ಮತದಾರರ ಪಟ್ಟಿ ಸೇರುತ್ತಿದ್ದಾರೆ, ಚುನಾವಣೆ ಸಮೀಪಿಸಿದಂತೆ ಆಮಿಷಗಳು ಆರಂಭವಾಗಿವೆ. ಇದಕ್ಕೆ ಬಲಿಗಳೇ ನವ ಮತ್ತು ಯುವ ಮತದಾರರು ಎಂಬುದು ವಿಪರ್ಯಾಸ.

ದೇಶ ಕಟ್ಟಬೇಕಾದ ಹುರಿಯಾಳುಗಳು ಯುವಕರೇ ಹೊರತು ರಾಜಕಾರಣಿಗಳಲ್ಲ. ಅವರ ಭವಿಷ್ಯವಿರುವುದು ನಿಮ್ಮ ಕೈಯ್ಯ ಲ್ಲಿಯೇ. ಮಿತ್ರರೇ, ಗಡಿಯಲ್ಲಿ ನೆತ್ತರು ಹರಿಸಿ ದೇಶ ರಕ್ಷಿಸುತ್ತಿರುವ ಜವಾನ, ನಾಡಿನಲ್ಲಿ ರಕ್ತ ಬಸಿದು ಬೆವರು ಹರಿಸುತ್ತಿರುವ ಅನ್ನ ದಾತನನ್ನು ಒಮ್ಮೆ ನೆನಪಿಸಿಕೊಳ್ಳಿ, ಬಲಿಕೊಡಬೇಡಿ ನಿಮ್ಮ ಕನಸುಗಳನ್ನು, ಮಾರಿಕೊಳ್ಳಬೇಡಿ ನಿಮ್ಮ ಸ್ವಂತಿಕೆಯನ್ನು. ದೇಶದ, ರಾಜ್ಯದ, ಹಿತದೃಷ್ಟಿಯಿಂದ ನಿಮ್ಮ ಮತ ಚಲಾಯಿಸಿ, ಬದಲಾವಣೆ ನಮ್ಮಿಂದಲೇ ಸಾಧ್ಯ.

Leave a Reply

Your email address will not be published. Required fields are marked *

fourteen + eighteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top