ಇವರು ಜಾತಿ, ಪಂಗಡ, ಧರ್ಮಗಳಾಚೆ ಸಮಸ್ತರ ಗೌರವಾದರಗಳಿಗೆ ಪಾತ್ರರಾದ ಅಪರೂಪದ ಸಂತ

Posted In : ಅಂಕಣಗಳು, ನೂರೆಂಟು ವಿಶ್ವ

ಹನ್ನೆರಡು ವರ್ಷಗಳಿಗೊಮ್ಮೆ ಬರುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ, ನಾಲ್ಕು ತಿಂಗಳ ಮೊದಲೇ, ದೀಪಾವಳಿ ವಿಶೇಷಾಂಕವನ್ನು ಅದಕ್ಕಾಗಿ ಮುಡಿಪಾಗಿಡಬೇಕೆಂದು ಸಂಪಾದಕೀಯ ಸಭೆಯಲ್ಲಿ ತೀರ್ಮಾನಿಸಿ, ಶ್ರವಣಬೆಳಗೊಳದ ಕರ್ಮಯೋಗಿ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಫೋಟೊವನ್ನು ರಕ್ಷಾಪುಟದಲ್ಲಿ ಪ್ರಕಟಿಸುವು ದೆಂದು ನಿರ್ಧರಿಸಿದೆವು. ‘ಜೈನಕಾಶಿ’ ಶ್ರವಣಬೆಳಗೊಳವೆಂದರೆ ಬಾಹುಬಲಿ ವಿಗ್ರಹ ಕಣ್ಮುಂದೆ ಬರುವುದು ಸಹಜ. ಬಾಹುಬಲಿಯ ಪ್ರತಿಬಿಂಬ ಮನಸ್ಸಿನಲ್ಲಿ ಮೂಡುತ್ತಿ ದ್ದಂತೆ ಮುನ್ನೆಲೆಗೆ ಬರುವ ಮತ್ತೊಂದು ಬಿಂಬವೆಂದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀ ಜಿಯವರದು. ಕ್ಷೇತ್ರ ದೊಂದಿಗೆ ಸ್ಥಾಯಿಯಾಗಿ ನಿಲ್ಲುವ ‘ಪ್ರತಿಮೆ’ ಹೀಗಾಗಿ ಸ್ವಾಮೀಜಿ ಅವರ ಫೋಟೋವನ್ನೇ ಬಳಸಲು ನಿರ್ಧರಿಸಿದೆವು. ಈ ಸಂಚಿಕೆ ಹಾಗೂ ಫೋಟೋಕ್ಕೆ ನೀಡಿದ ಶೀರ್ಷಿಕೆ: ‘ಬೆಳಗೊಳದ ಮಹಾಬೆಳಕು’

ಇದನ್ನು ಗಮನಿಸಿದ ಜೈನ ಸಾಹಿತ್ಯದ ವಿದ್ವಾಂಸರೊಬ್ಬರು, ‘ಅನೇಕರು ಬಾಹುಬಲಿಯೇ ಬೆಳಗೊಳದ ಮಹಾ ಬೆಳಕು ಎಂದು ಭಾವಿಸಿದ್ದರು. ಆದರೆ ನೀವು ಸ್ವಾಮೀಜಿಯವರಿಗೆ ಆ ವಿಶೇಷಣ ಬಳಸಿದ್ದು ಅತ್ಯಂತ ಸೂಕ್ತ ಹಾಗೂ ದೂರಚಿಂತನೆಯಿಂದ ಕೂಡಿದೆ. ವಿಗ್ರಹವಾಗಿ ಬಾಹುಬಲಿ ಶಾಂತಿಯ ಅಮರ ಸಂದೇಶ ಸಾರಿದರೆ, ಕಳೆದ ಅರ್ಧಶತಮಾನದಿಂದ ಶ್ರವಣಬೆಳಗೊಳಕ್ಕೆ ಧಾರ್ಮಿಕ ಮಾರ್ಗದರ್ಶನ ನಾಯಕತ್ವ ನೀಡುತ್ತಿರುವ ಸ್ವಾಮೀಜಿಯವರು ಕ್ಷೇತ್ರದ ತೋರುದೀಪ, ಮಹಾಬೆಳಕು. ನಿಮ್ಮ ಶೀರ್ಷಿ ಕೆ ತುಂಬಾ ಹಿಡಿಸಿತು’ ಎಂದು ಹೇಳಿದರು.

ನಾನು ಅತಿಯಾಗಿ ಗೌರವಿಸುವ, ಆರಾಧಿಸುವ, ಪ್ರೀತಿಸುವ, ಸ್ವಲ್ಪ ಜಾಸ್ತಿಯಾಗಿಯೇ ಇಷ್ಟಪಡುವ (ಇವೆಲ್ಲವನ್ನೂ ಏಕಕಾಲಕ್ಕೆ ಮಾಡುವುದು ಕಷ್ಟ) ಕೆಲವೇ ಕೆಲವು ಕರ್ನಾಟಕದ ಸ್ವಾಮೀಜಿಗಳಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಕಾರಣ ಅವರಲ್ಲಿ ಅಂಥ ಗುಣಗಳಿವೆ. ಅವರ ವ್ಯಕ್ತಿತ್ವವೇ ಅಂಥದು. ನನಗೆ ಅವರನ್ನು ಕಂಡರೆ ಹೆಚ್ಚು ಭಕ್ತಿ, ಅತಿ ಕಡಿಮೆ ಭಯ, ಗೌರವ, ಇನ್ನೂ ಜಾಸ್ತಿ ಪ್ರೀತಿ. ಇವೆಲ್ಲಕ್ಕಿಂತ ಹೆಚ್ಚಿನ ಅಭಿಮಾನ. ಅಪಾರ ಹೆಮ್ಮೆ.

ಸ್ವಾಮೀಜಿಯವರು ಪೀಠಕ್ಕೆ ಬಂದು ಹತ್ತಿರ ಹತ್ತಿರ ಅರ್ಧ ಶತಮಾನವಾಗುತ್ತಾ (48 ವರ್ಷ) ಬಂತು. ಅವರೆಂದೂ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾದವರೇ ಅಲ್ಲ. ಎಂದೂ ವಿವಾದ, ಟೀಕೆಗೆ ಗುರಿಯಾದವರಲ್ಲ. ಚರ್ಚೆಗೂ ತಮ್ಮನ್ನು ಬಿಟ್ಟುಕೊಂಡ ವರಲ್ಲ. ಪತ್ರಿಕೆ, ಟಿವಿಗಳಲ್ಲಿ ಕಾಣಿಸಿಕೊಂಡವರಲ್ಲ. ರಾಜಕಾರಣಿಗಳು, ಮಂತ್ರಿಗಳನ್ನು ಅಕ್ಕ ಪಕ್ಕ ಕುಳ್ಳಿರಿಸಿಕೊಂಡು ಪ್ರಭಾವದ ನಗೆ ಪೋಸನ್ನು ಕೊಟ್ಟವರೂ ಅಲ್ಲ. ವಾರದಲ್ಲಿ ನಾಲ್ಕು ಕಡೆ ಭಕ್ತರ ಮನೆಗೆ ಪಾದಪೂಜೆ ಮಾಡಿಸಿಕೊಂಡವರಲ್ಲ. ಅಡ್ಡಪಲ್ಲಕ್ಕಿ ಯಂತೂ ಉಹೂಂ.. ಕೇಳಲೇಬೇಡಿ. ಜೈಕಾರ ಹಾಕಿಸಿಕೊಂಡವರೂ ಅಲ್ಲ.

ತಿಂಗಳಲ್ಲಿ ಹತ್ತು ದಿನ ಸಭೆ, ಸಮಾರಂಭಗಳಲ್ಲಿ ದಿವ್ಯಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುವವರೂ ಅಲ್ಲ. ಹೀಗಾಗಿ ಇವರು ಸಮಾಜಕ್ಕೆ ಕರೆ ಹಾಗೂ ಕರ್ಕರೆ ಕೊಡುವ ಸ್ವಾಮೀಜಿಯೂ ಅಲ್ಲ. ಮುಖ್ಯಮಂತ್ರಿ, ರಾಜ್ಯಪಾಲ, ಪ್ರಧಾನಿ, ರಾಷ್ಟ್ರಪತಿಗಳನ್ನು ವರ್ಷಕ್ಕೊಮ್ಮೆ ಮಠಕ್ಕೆ ಕರೆಯಿಸಿ ತಮ್ಮ ಪ್ರಭಾವ, ಡೌಲು, ರುಬಾಬು ಮೆರೆಯುವ ಸನ್ಯಾಸಿಯೂ ಅಲ್ಲ. ಕಂಡಕಂಡಲ್ಲಿ ಸರಕಾರಿ ಜಮೀನು, ಗೋಮಾಳದ ಮೇಲೆ ಕಣ್ಣು ಹಾಕಿ, ಕಬ್ಜಕ್ಕೆ ಎಳೆದುಕೊಳ್ಳುವ ಅಲ್ಲ.

ಶಿಕ್ಷಣಸೇವೆ, ವಿದ್ಯಾಪ್ರಸಾರದ ಹೆಸರಿನಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜ್ ಪರವಾನಗಿ ಪಡೆದುಕೊಂಡು ಕೋಟಿಗಟ್ಟಲೆ ಡೊನೇಶನ್ ಪಡೆದು ಶಿಕ್ಷಣವನ್ನೇ ದಂಧೆಯಾಗಿ ಮಾಡಿಕೊಂಡ ವ್ಯಾಪಾರಿಬುದ್ಧಿ ಜಗದ್ಗುರುವೂ ಇವರಲ್ಲ. ಕಾಲಕಾಲಕ್ಕೆ ಮಂತ್ರಿ ಗಳು, ಜನಪ್ರತಿನಿಧಿಗಳನ್ನು ಮಠಕ್ಕೆ ಕರೆಯಿಸಿಕೊಂಡು ಸರಕಾರಕ್ಕೆ ಆದೇಶ ನೀಡುವ, ತಮಗೆ ಬೇಕಾದ ‘ಆದೇಶ’ ಪಡೆಯುವ ಸ್ವಾಮೀಜಿಯೂ ಇವರಲ್ಲ. ಕಾಲಕಾಲಕ್ಕೆ ತಮ್ಮ ಜಾತಿ, ಪಂಗಡ, ಧರ್ಮದ ಸಮಾವೇಶ ಮಾಡುತ್ತಾ ತಮ್ಮ ಕೋಮಿನ ಬಲಪ್ರದ ರ್ಶನ ಮಾಡುವ, ವೋಟ್‌ಬ್ಯಾಂಕ್ ಭದ್ರಪಡಿಸುವ, ರಾಜಕಾರಣಿ ಬುದ್ಧಿಯ ಸ್ವಾಮೀಜಿಯವರಂತೂ ಅಲ್ಲವೇ ಇವೆಲ್ಲವುಗಳಿಂದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಗಾವುದದೂರ. ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಮಾತ್ರ ಸ್ವಾಮೀಜಿ ಕಾಣಿಸಿಕೊಳ್ಳುತ್ತಾರೆ. ಆಗ ಮಾತ್ರ ಅವರ ಕುರಿತು ಲೇಖನ, ಸಂದರ್ಶನಗಳು ಪ್ರಕಟವಾಗುತ್ತವೆ.

ಆನಂತರ ಸ್ವಾಮೀಜಿಯವರನ್ನು ಪತ್ರಿಕೆ, ಟಿವಿಯಲ್ಲಿ ನೋಡಬೇಕೆಂದರೆ ಪುನಃ ಹನ್ನೆರಡು ವರ್ಷ ಕಾಯಬೇಕು. ತಾವಾಯಿತು, ತಮ್ಮ ಕೆಲಸವಾಯಿತು. ತಾವಾಯಿತು, ತಮ್ಮ ಅನುಷ್ಠಾನ, ಪೂಜೆ, ಧ್ಯಾನ, ಧಾರ್ಮಿಕ ಕಾರ್ಯಗಳಾಯಿತು. ಮಠಕ್ಕೆ ಬರುವ ಭಕ್ತ ರೊಂದಿಗೆ ಮಾತುಕತೆ, ಅಧ್ಯಯನ, ಧಾರ್ಮಿಕ ಆಚರಣೆಗಳಲ್ಲೇ ಸ್ವಾಮೀಜಿ ನಿರತ.

ಎಲ್ಲವೂ ಸನ್ಯಾಸಿಯಾಗುತ್ತಾರೆ. ಆದರೆ ಸ್ವಾಮೀಜಿಯಾಗಿ ಕಂಡಿದ್ದೆಲ್ಲ ಬೇಕು ಎನ್ನುತ್ತಾರೆ. ಇಂಥ ಸ್ವಾಮೀಜಿಗಳ ಮಧ್ಯದಲ್ಲಿ ಶ್ರವ ಣಬೆಳಗೊಳದ ಸ್ವಾಮೀಜಿಯವರು ಭಿನ್ನವಾಗಿ, ಬೆಳಕಾಗಿ ಕಾಣುತ್ತಾರೆ. ಪೀಠಾಧಿಪತಿಯಾಗಿ, ಸ್ವಾಮೀಜಿಯಾಗಿ ಎಲ್ಲ ಆಸೆಗಳನ್ನು ಮೀರಿ ನಿಲ್ಲುವುದು, ಪ್ರಚಾರದಿಂದ ದೂರ ಉಳಿಯುವುದು ಈ ದಿನಗಳಲ್ಲಿ ತೀರಾ ಅಪರೂಪವೇ. ಈ ಎಲ್ಲ ಕಾರಣಗಳಿಂದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಉಳಿದೆಲ್ಲ ಯತಿವರ್ಯರಿಗಿಂತ, ಸನ್ಯಾಸಿಗಳಿಗಿಂತ, ಸ್ವಾಮೀಜಿಗಳಿಗಿಂತ ಗೊಮ್ಮ ಟೇಶ್ವರನಂತೆ ಎತ್ತರದಲ್ಲಿ ಎದ್ದು ನಿಲ್ಲುತ್ತಾರೆ !

ಕಳೆದ ಮಹಾಮಸ್ತಕಾಭಿಷೇಕದ ನಂತರ ಸ್ವಾಮೀಜಿಯವರು ಬೆಂಗಳೂರಿಗೂ ಬರಲಿಲ್ಲ. ರಾಜಧಾನಿಯ ಸುಳಿಯಲಿಲ್ಲ. ಕಾರನ್ನಾ ಗಲಿ, ವಾಹನವನ್ನಾಗಲಿ ಏರಲಿಲ್ಲ. ಅಷ್ಟಕ್ಕೂ ಮಠ ಬಿಟ್ಟು ಕದಲಲಿಲ್ಲ. ಅನುಷ್ಠಾನ, ಅಧ್ಯಯನ, ಆಚರಣೆಗಳನ್ನೇ ಪರಮ ಧರ್ಮ ಎಂದು ಭಾವಿಸಿ ಮಠದಲ್ಲಿಯೇ ಪ್ರತಿಷ್ಠಾಪಿಸಿಕೊಂಡುಬಿಟ್ಟರು. ಚಾತುರ್ಮಾಸ್ಯ ಸಮಯದಲ್ಲಿ ‘ಎರಡು ತಿಂಗಳು’ ಬಿಟ್ಟರೆ, ಯಾವ ಸ್ವಾಮೀಜಿಗಳೂ ಒಂದೆಡೆ ಕುಳಿತಿರುವುದಿಲ್ಲ. ಅವರಿಗೆ ನೂರೆಂಟು ಕೆಲಸ. ಎಲ್ಲೆಡೆ ತಿರುಗಬೇಕು, ಆಶೀರ್ವಚನ ನೀಡಬೇಕು, ಎಲ್ಲಾ ಕಡೆಗಳಲ್ಲೂ ತಾವಿರಬೇಕು ಎಂಬ ವಾಂಛೆ. ಯಾವುದಕ್ಕೂ ಪುರಸೊತ್ತಿಲ್ಲದವರೆಂದರೆ ಸ್ವಾಮೀಜಿಗಳು. ಆದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಹನ್ನೆರಡು ವರ್ಷ ಚಾತುರ್ಮಾಸ್ಯ !

ಕರ್ನಾಟಕದ ಎಲ್ಲ ಕೋಮು, ಜಾತಿಯ ಸ್ವಾಮೀಜಿಗಳಿಗೆ ಕರ್ನಾಟಕವೇ ಸೀಮೆ. ರಾಜ್ಯದ ಹೊರಗೆ ಭಕ್ತಗಣವಿಲ್ಲ. ಆದರೆ ಚಾರು ಕೀರ್ತಿಯವರಿಗೆ ಕರ್ನಾಟಕದಲ್ಲಿ ಇರುವ ಭಕ್ತರಿಗಿಂತ ಕರ್ನಾಟಕದ ಹೊರಗೇ ಅಪಾರ ಭಕ್ತರಿದ್ದಾರೆ. ಪಾದಪೂಜೆ ಮಾಡಿಸಿ ಕೊಳ್ಳುವ ಚಪಲಕ್ಕೆ ಬಿದ್ದರೆ, ಏಳು ಜನ್ಮ ಎತ್ತಿಬಂದರೂ ಮುಗಿಯಲಿಕ್ಕಿಲ್ಲ. ಅಷ್ಟು ಭಕ್ತರ ಮನೆಗಳಿವೆ. ಉತ್ತರದ ಎಲ್ಲಾ ರಾಜ್ಯಗಳಲ್ಲೂ ಗಣನೀಯ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಇನ್ನು ಇವರ ಭಕ್ತರಾರೂ ಬಡವರಲ್ಲ. ಎಲ್ಲರೂ ಶ್ರೀಮಂತರೇ. ಸ್ವಾಮೀಜಿ ಯವರು ಬಾಯಿಬಿಟ್ಟು ಹೇಳಿದರೆ, ಒಂದಲ್ಲ ಹತ್ತು ಗೊಮ್ಮಟನನ್ನು ಕೆತ್ತಿ ತಾಕತ್ತು ಇರುವವರೇ. ನಮ್ಮ ದೇಶದ ಅತ್ಯಂತ ಧನಿಕರೆಂದು ಕರೆಯಿಸಿಕೊಳ್ಳುವ ಜೈನರು, ಮಾರವಾಡಿಗಳು, ವಣಿಕರು ಶ್ರೀಮಠದ ಭಕ್ತರು. ಸ್ವಾಮೀಜಿಯವರು ಒಂದು ಸಲ ಹೊರ ರಾಜ್ಯಗಳಿಗೆ ಪ್ರವಾಸ ಹೋಗಿ ಬಂದರೆ, ಐದೈದು ಎಂಜಿನಿಯರಿಂಗ್, ಮೆಡಿಕಲ್ ಕಾಲೇಜ್‌ಗಳನ್ನು ಕಟ್ಟಬಹುದು. ಅದ ರಿಂದ ಮತ್ತಷ್ಟು ಹಣ ಸಂಪಾದಿಸಬಹುದು.

ಆದರೆ ಚಾರುಕೀರ್ತಿ ಸ್ವಾಮೀಜಿಯವರು ಈ ಕೆಟಗರಿಗೆ ಸೇರುವವರಲ್ಲ. ಪ್ರಾಯಶಃ ಅವರು ಉತ್ತರದ ಕಡೆ ಹೋಗದೇ ಹದಿನೈದು ಇಪ್ಪತ್ತು ವರ್ಷಗಳಾಗಿರಬಹುದು. ಗೊಮ್ಮಟೇಶ್ವರ ವಿಂಧ್ಯಗಿರಿಯಲ್ಲಿ ನಿಂತು ಜಗತ್ತಿಗೆ ಶಾಂತಿ ಸಂದೇಶ ಭಟ್ಟಾರಕ ಸ್ವಾಮೀಜಿ ಯವರು ಮಠದಲ್ಲಿ ಕುಳಿತು ತಮ್ಮ ಕಾಯಕನಿಷ್ಠೆಯಿಂದ ಧರ್ಮದ ಸಂದೇಶ ನೀಡುತ್ತಿದ್ದಾರೆ. ಈ ಕಾಲದಲ್ಲಿ ಸ್ವಾಮೀಜಿ ಯಾಗುವುದು ಸುಲಭ ಹಾಗೂ ಸ್ವಾಮೀಜಿಯಾಗುವುದು ಲಾಭದಾಯಕ. ಆದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯಾಗುವುದು ಬಹಳ ಕಷ್ಟ ಹಾಗೂ ಕಠೋರ. ಅದೇ ದೊಡ್ಡ ವ್ರತ.

2006ರ ಮಹಾಮಸ್ತಕಾಭಿಷೇಕ ಮುಗಿದ ನಂತರ, ಸ್ವಾಮೀಜಿಯವರು ಒಂದು ದೊಡ್ಡ ಸಂಕಲ್ಪ ಮಾಡಿದರು. ಈ ವಿಶ್ವದ ಕೌತುಕ, ಬದುಕಿನ ಮಹತ್ವ, ಜೀವನ ಸಂದೇಶಗಳನ್ನೊಳಗೊಂಡ, ಅತ್ಯಂತ ಶ್ರೇಷ್ಠ ಹಾಗೂ ಉಪಯುಕ್ತ ‘ಧವಳಗ್ರಂಥ’ವನ್ನು ಮೂಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವ ‘ಮಹಾಯಜ್ಞ’ಕ್ಕೆ ಹಾಕಿದರು. ಇದು ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದಂತೆ, ಅಕ್ಷರಾಭಿಷೇಕ ! ಶತಶತಮಾನಗಳಲ್ಲಿ ಆಗುವಂಥ ಅಪರೂಪದ ಕಾರ್ಯ. ಅದು ಈಗ ಆಗದಿದ್ದರೆ ಇನ್ನೆಂದೂ ಆಗದಂಥ (ಘೆಟಡಿ ಟ್ಟ ಘೆಛಿಛ್ಟಿ) ಅತಿ ಮಹತ್ವದ ಕೆಲಸ. ಸ್ವಾಮೀಜಿಯವರು ಈ ಕೆಲಸಕ್ಕೆ ಘನ ವಿದ್ವಾಂಸರನ್ನು ಸೇರಿಸಿಕೊಂಡು, ಪ್ರಾಕೃತದಿಂದ ಹಾಗೂ ಕನ್ನಡ ಬಲ್ಲ ಅನುವಾದಕರು, ಪ್ರಾಜ್ಞರನ್ನು ಕೂಡಿಸಿಕೊಂಡು, ಮೇಲುಸ್ತುವಾರಿಯನ್ನು ತಾನೇವಹಿಸಿಕೊಂಡು, ಸುಮಾರು ನಲವತ್ತು ಅಮೂಲ್ಯ, ಅನರ್ಘ್ಯರತ್ನಗಳಂಥ ಗ್ರಂಥಗಳನ್ನು ಕನ್ನಡಕ್ಕೆ ತರ್ಜುಮೆ ಇದು ಎಂಟು ವಿಶ್ವವಿದ್ಯಾಲಯಗಳು ಮಾಡುವ ಕೆಲಸಕ್ಕಿಂತ ಮಿಗಿಲಾದುದು.

ಅಷ್ಟೇ ಅಲ್ಲ, ನಾಲ್ಕು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಕೆಲಸಕ್ಕೆ ಸಮ. ಹಣ ಸಿಗುವುದೆಂದು ವಿಶ್ವವಿದ್ಯಾಲಯವನ್ನಾದರೂ ಇಂದು ಕಟ್ಟಬಹುದು. ಆದರೆ ಧವಳ ಗ್ರಂಥ ಅನುವಾದಿಸುವರ್ಯಾರು ? ಇದೂ ಒಂಥರ ಗೊಮ್ಮಟನ ವಿಗ್ರಹ ಕಡೆದಂತೆ !

ಈ ಗ್ರಂಥಗಳ ಅನುವಾದ ಕಾರ್ಯ ಮುಗಿದು, ಕನ್ನಡದಲ್ಲಿ ಪುಸ್ತಕ ಹೊರಬರುವವರೆಗೆ ಸ್ವಾಮೀಜಿಯವರು ಮಿಸುಕಾಡಲಿಲ್ಲ. ಹಠ ಹಡಿದು ಕುಳಿತುಬಿಟ್ಟರು. ಮಠ ಬಿಟ್ಟು ಕದಲಲಿಲ್ಲ. ಈ ಅವಧಿಯಲ್ಲಿ ಅವರು ಮೊಬೈಲ್ ಲ್ಯಾಂಡ್‌ಲೈನ್ ಫೋನನ್ನು ಸಹ ಮುಟ್ಟಲಿಲ್ಲ. ಫೋನಿಲ್ಲದೇ ಬದುಕಲು ಆಗುವುದೇ ಇಲ್ಲ ಎಂಬ ಇಂದಿನ ಕಾಲಘಟ್ಟದಲ್ಲಿ ಅದಿಲ್ಲದೇ ಸಹಜವಾಗಿ, ಎಂದಿನಂತೆ ಅಷ್ಟೇ ಪರಿಣಾಮಕಾರಿಯಾಗಿ, ನೆಮ್ಮದಿಯಿಂದ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟರು. ಫೋನು, ವಾಹನವನ್ನು ತ್ಯಜಿಸಿದರು. ಸ್ವಾಮೀಜಿಯವರೊಂದಿಗೆ ಮಾತಾಡಬೇಕೆಂದರೆ, ಶ್ರವಣಬೆಳಗೊಳಕ್ಕೆ ಖುದ್ದಾಗಿ ಬಂದು ಭೇಟಿ ಮಾಡಬೇಕಾಗಿತ್ತು. ಸ್ವಾಮೀಜಿಯವರಿಗೆ ಬೇರೆಯವರೊಂದಿಗೆ ವ್ಯವಹರಿಸಬೇಕೆಂದಾದಾಗ ಪತ್ರಕ್ಕೆ ಮೊರೆ ಹೋಗುತ್ತಿದ್ದರು, ಇಲ್ಲವೇ ಸಹಾಯಕರ ನೆರವು ಯಾಚಿಸುತ್ತಿದ್ದರು. ಈ ಹನ್ನೆರಡು ವರ್ಷಗಳಲ್ಲಿ ಅವರು ಮಾಡಿದ ತಪಸ್ಸು, ತ್ಯಾಗ, ಬಾಹ್ಯಜಗತ್ತಿನ ಆಕರ್ಷಣೆಗಳ ಅಸಾಧಾರಣವಾದುದು. ಇಂಥ ಪರಮಪವಿತ್ರ ಕಾರ್ಯ ಅಕ್ಷರಪ್ರೇಮಿ, ಧರ್ಮನಿಷ್ಠ, ಜೀವಮುಖಿ, ದೂರದೃಷ್ಟಿ ಸಂವೇದಿ, ಅತಿಸೂಕ್ಷ್ಮಮತಿ ಜಾಗೃತಮನಸ್ಕನಿಂದ ಮಾತ್ರ ಸಾಧ್ಯ. ಅದು ಮಸ್ತಕಾಭಿಷೇಕವಾದರೆ, ಇದು ಪುಸ್ತಕಾಭಿಷೇಕ! ಇವೆರಡನ್ನೂ ಸ್ವಾಮೀಜಿ ಅತ್ಯಂತ ದಕ್ಷತೆಯಿಂದ ಮಾಡಿ, ಈಗ ಮತ್ತೊಂದು ‘ಮಹಾಯಜ್ಞ’ಕ್ಕೆ ಸಜ್ಜಾಗಿ ನಿಂತಿದ್ದಾರೆ.

ಮಹಾಮಸ್ತಕಾಭಿಷೇಕವೆಂದರೆ ಅದು ಕೇವಲ ‘ಮಂಡೆಪೂಜೆ’ ಅಷ್ಟೇ ಅಲ್ಲ. ಅದು ಎಂಥ ಸಂಯಮಶೀಲನಲ್ಲೂ ‘ಮಂಡೆಬಿಸಿ’ ಮಾಡುವ ಮಹಾಕೈಂಕರ್ಯ. ಉತ್ತರದಲ್ಲಿ ಮಹಾಕುಂಭಮೇಳ ಹೇಗೋ, ದಕ್ಷಿಣದಲ್ಲಿ ಮಹಾಮಸ್ತಕಾಭಿಷೇಕ. ಇದು ಹತ್ತಾರು ಲಕ್ಷ ಜನ ಮಾನವತೆಯ ಮಹಾಸಮ್ಮಿಲನ, ಶಾಂತಿ ಸಾರುವ ಮಹಾಪ್ರೇರಕನಿಂದ ಸಂದೇಶ ಪಡೆದು ಪುನೀತರಾಗುವ ಶಾಂತಮಹಾಸಾಗರ. ಇದರ ಆಯೋಜನೆ, ಅಚ್ಚುಕಟ್ಟು ಸಂಘಟನೆಯೇ ಧಾರ್ಮಿಕ ದೇದೀಪ್ಯಮಾನವಾದುದು.

ಇಂಥ ನಾಲ್ಕು ಮಹಾಮೇರುಮಜ್ಜನಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಶಿಸ್ತಿನಿಂದ ಸಂಘಟಿಸಿ, ನಾಯಕತ್ವ ನೀಡಿದ ಅಗ್ಗಳಿಕೆ ಸ್ವಾಮೀಜಿಯವರದು. ಇದಕ್ಕೆ ಅಪರಿಮಿತ ಸಂಘಟನಾ ಚಾತುರ್ಯ, ದಕ್ಷತೆ, ಎಲ್ಲರನ್ನೂ ಜತೆಯಲ್ಲೇ ಕರೆದುಕೊಂಡು ಹೋಗುವ ಮಿಳಿತ ಭಾವ, ಪ್ರಭಾವ, ಮುಂದಾಳತ್ವಗುಣಗಳೆಲ್ಲ ಬೇಕು. 1971ರಿಂದ ಇಲ್ಲಿನ ತನಕ ನಡೆದ ಎಲ್ಲ ಮಹಾಮಸ್ತಕಾ ಭಿಷೇಕಗಳಲ್ಲೂ ಅವರು ಇದನ್ನು ಬಂದಿದ್ದಾರೆ. ಮಂತ್ರಿ, ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನಿ ಹಾಗೂ ರಾಷ್ಟ್ರಪತಿ ಅವರನ್ನು ಭೇಟಿ ಮಾಡದೇ, ಫೋನಿನಲ್ಲೂ ಮಾತಾಡದೇ, ಅವರೆಲ್ಲರನ್ನೂ ಕ್ಷೇತ್ರಕ್ಕೆ ಕರೆಯಿಸುವ ಛಲ, ತಾಕತ್ತು ಸ್ವಾಮೀಜಿ ಯವರದು. 1971 ರಿಂದ ಇಲ್ಲಿಯವರೆಗೆ ಆಯಾ ಕಾಲದಲ್ಲಿ ಅಧಿಕಾರದಲ್ಲಿದ್ದ ಎಲ್ಲ ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟ್ರ ಪತಿಗಳೆಲ್ಲ ಶ್ರವಣಬೆಳಗೊಳಕ್ಕೆ ಬಂದು ಹೋಗಿದ್ದಾರೆ. ಮಠ ಬಿಟ್ಟು ಕದಲದಿದ್ದರೂ, ಫೋನಿನಲ್ಲೂ ಮಾತಾಡದಿದ್ದರೂ, ತಮ್ಮ ವ್ಯಕ್ತಿತ್ವದಿಂದ ಎಲ್ಲರನ್ನೂ ಅವರು ಸೂಜಿಗಲ್ಲಿನಂತೆ ಆಕರ್ಷಿಸಬಲ್ಲರು.

ಮೂಲತಃ ಚಾರುಕೀರ್ತಿ ಸ್ವಾಮೀಜಿಯವರು ಉದ್ಧಾಮ ಪಂಡಿತರು, ತತ್ವಜ್ಞಾನಿಗಳು, ಜೈನಸಿದ್ಧಾಂತದಲ್ಲಿ ಅವರ ಅಧ್ಯಯನ ಆಳವಾದುದು. ಸಂಸ್ಕೃತ, ಕನ್ನಡ ಹಾಗೂ ಪ್ರಾಕೃತದಲ್ಲಿ ಜೈನ ಧರ್ಮ ಸಾರ, ತತ್ತ್ವ, ಸಿದ್ಧಾಂತಗಳನ್ನು ಅಧ್ಯಯನ ಮಾಡಿದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಶಿಕ್ಷಣ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಫಿಲಾಸಫಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆಚಾರ್ಯ ಮುನಿ ಶುಭಚಂದ್ರ ಅವರಿಂದ ‘ಚಾರುಕೀರ್ತಿ ಸ್ವಾಮೀಜಿ’ ಎಂದು ನಾಮಾಂಕಿತರಾಗಿ, 1970ರಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಪೀಠಾಧಿಪತಿಗಳಾದರು. ಅಂದಿನಿಂದ ಇಲ್ಲಿಯವರೆಗೆ ಮಠಕ್ಕೆ, ಕ್ಷೇತ್ರಕ್ಕೆ ಧಾರ್ಮಿಕ ನೇತೃತ್ವ ನೀಡುತ್ತಲೇ ಬಂದಿದ್ದಾರೆ. ಅಮೆರಿಕ, ಆಫ್ರಿಕಾದ ಕೆಲ ದೇಶಗಳು, ಸಿಂಗಾಪುರ ಮುಂತಾದ ದೇಶಗಳಲ್ಲಿ ಧಾರ್ಮಿಕ ಚಟುವಟಿಕೆ ನಿಮಿತ್ತ ಪ್ರವಾಸ ಕೈಗೊಂಡ ಸ್ವಾಮೀಜಿಯವರು ಉತ್ತಮ ವಾಗ್ಮಿಗಳು. ಯಾವುದೇ ವಿಷಯದ ಕುರಿತಾ ದರೂ ತಲಸ್ಪರ್ಶಿಯಾಗಿ, ಮನಮುಟ್ಟುವಂತೆ, ಗಂಭೀರವಾಗಿ ಮಾತಾಡಬಲ್ಲರು. ಕಾರ್ಯಕ್ರಮ, ಪ್ರಚಾರಗಳಿಂದ ದೂರವಾದರೂ ಲೋಕಜ್ಞಾನ ಹಾಗೂ ಪ್ರಭಾವದಿಂದ ದೂರ ಸರಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅವರು ಹೆಚ್ಚು ಅಧ್ಯಯನಮುಖಿಯಾಗಿರು ವುದು ಅವರ ಜ್ಞಾನದಾಹದ ಪ್ರತೀಕ. ಮಿತ ಹಾಗೂ ಮೃದು ಭಾಷಿಯಾಗಿರುವ ಸ್ವಾಮೀಜಿಯವರು ಯಾವುದೇ ಉಸಾಬರಿಗೂ ಹೋಗುವುದಿಲ್ಲ. ಒಬ್ಬ ಸ್ವಾಮೀಜಿ, ಪೀಠಾಧಿಪತಿಗಳು ಹೇಗಿರಬೇಕೆಂಬುದಕ್ಕೆ ಹಾಗೂ ಆದರ್ಶ.

ಇಷ್ಟಾಗಿಯೂ ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆ, ಕೈಂಕರ್ಯಗಳಲ್ಲಿ, ಅಭಿವೃದ್ಧಿ ಕಾರ್ಯಕ್ರಮ ಗಳಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಈ ಅಬ್ಬರ, ಭರಾಟೆಯಲ್ಲಿ ಧಾರ್ಮಿಕ ಅನುಷ್ಠಾನಗಳನ್ನು ಕಡೆಗಣಿಸದಿರುವುದು ಅವರ ಹೆಚ್ಚುಗಾರಿಕೆ. ಈ ಎಲ್ಲ ಕಾರಣಗಳಿಂದ ಅವರು ಎಲ್ಲರಿಗಿಂತ ಭಿನ್ನರಾಗಿ, ವಿಶೇಷರಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಾರೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ವಜನೇ ಬೇರೆ. ಬದುಕಿನ ವರ್ತಮಾನ, ಪ್ರಸ್ತುತತೆ, ಆಧುನಿಕತೆಯ ಸತ್ತ್ವಗಳನ್ನು ಹೀರಿಕೊಂಡು ಧರ್ಮ, ಸಂಪ್ರದಾಯಗಳ ಭದ್ರ ಬುನಾದಿಯಲ್ಲಿ ಬದುಕನ್ನು ಸಮಷ್ಟಿಪ್ರಜ್ಞೆಯಲ್ಲಿ ಜೀವನವನ್ನು ಚೆಂದಗಾಣಿಸಿ ಕೊಳ್ಳುವ ಸೊಗಸುಗಾರಿಕೆಯ ಪ್ರತಿಪಾದಕರಾಗಿರುವ ಸ್ವಾಮೀಜಿಯವರು ಎಲ್ಲ ಜಾತಿ, ಧರ್ಮ, ಕೋಮು, ಪಂಗಡ ಮೀರಿಯೂ ಪ್ರೀತಿ, ಗೌರವ, ಆದರಗಳನ್ನು ಸಂಪಾದಿಸಿಕೊಂಡ ಅಪರೂಪದ ಸಂತ. ಈ ನಾಡು, ದೇಶ ಹೆಮ್ಮೆಪಡುವ ಸುಸಂಸ್ಕೃತ, ಶ್ರೇಷ್ಠ ಸನ್ಯಾಸಿ.

ಸ್ವಾಮೀಜಿಯವರು ಮತ್ತೊಂದು ಮಹಾಸಾಧನೆಗೆ ಅಣಿಯಾಗುತ್ತಿದ್ದಾರೆ. ಲೋಕಶಾಂತಿ ಸಂದೇಶವನ್ನು ಇಡೀ ವಿಶ್ವಕ್ಕೇ ಸಾರುತ್ತಿದ್ದಾರೆ.

ಬೆಳಗೊಳದ ಮಹಾಬೆಳಕು ಸಮಸ್ತರ ಅವಿವೇಕ,ಅಜ್ಞಾನವೆಂಬ ಕಗ್ಗತ್ತ್ತಲನ್ನು ದೂರಮಾಡಲಿ.

Leave a Reply

Your email address will not be published. Required fields are marked *

four × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top